

ಮೈಸೂರು: ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥಗೊಂಡಿರುವ ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆ.ಸಾಲುಂಡಿ ಗ್ರಾಮದಲ್ಲಿ ಇದೀಗ ಕಾಲರಾ ಭೀತಿ ಎದುರಾಗಿದ್ದು, ಗ್ರಾಮದಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿದೆ. ಹೀಗಾಗಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ತಂಡ ಬೀಡುಬಿಟ್ಟು ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
ಕಾಲರಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಜನರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ವಾಂತಿ, ಬೇದಿ ಕಾಣಿಸಿಕೊಂಡ ಎಲ್ಲರಿಗೂ ಕಾಲರಾಕ್ಕೆ ಸಂಬಂಧಿಸಿದ ಔಷಧ ನೀಡಲಾಗುತ್ತಿದೆ. ಮಂಗಳವಾರ ಮೃತಪಟ್ಟ ಕನಕರಾಜು ಅವರಿಗೆ ಕಾಲರಾ ಕಾಣಿಸಿಕೊಂಡಿತ್ತು. ಗ್ರಾಮದ ಮತ್ತೊಬ್ಬರಿಗೂ ಕಾಲರಾ ದೃಢಪಟ್ಟಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
95 ಜನರು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ 73 ಹಿರಿಯರು ಹಾಗೂ 22 ಮಕ್ಕಳು ಇದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 23, ಕೆ.ಆರ್. ಆಸ್ಪತ್ರೆಯಲ್ಲಿ 6 ಹಾಗೂ 8 ಜನರು ಖಾಸಗಿ ಆಸ್ಪತ್ರೆಯಲ್ಲಿ ಸೇರಿದಂತೆ ಒಟ್ಟು 37 ಜನರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಉಳಿದವರು ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ.
ಅಸ್ವಸ್ಥರು ಚೇತರಿಕೆ: ಆಸ್ಪತ್ರೆಯಲ್ಲಿ ದಾಖಲಾಗಿರುವವರು ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರು ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವವರ ಆರೋಗ್ಯವೂ ಉತ್ತಮವಾಗಿದೆ. ಅವರನ್ನು 48 ಗಂಟೆ ಆಸ್ಪತ್ರೆಯಲ್ಲಿ ಉಳಿಸಿಕೊಂಡು ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಡಿಸ್ಚಾರ್ಜ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.