ಮೈಸೂರಿನಲ್ಲಿ ಕಾಲರಾ ಪತ್ತೆ, ನಿಯಂತ್ರಣಕ್ಕೆ ನಗರಪಾಲಿಕೆ ಕ್ರಮ

e081be00-a84d-4df0-af72-10bc21d118a6
Published on

ಮೈಸೂರು: ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದ ಕಾಲರಾ ಸಾಂಕ್ರಾಮಿಕ ರೋಗ ಈಗ ಮೈಸೂರು ನಗರದಲ್ಲಿಯೇ ಕಾಣಿಸಿಕೊಂಡಿದೆ. ರಾಜಧಾನಿ ಬೆಂಗಳೂರಿನ ಬಳಿಕ ಈಗ ಮೈಸೂರು ನಗರದಲ್ಲೂ ಕಾಲರಾ ಸೋಂಕು ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕೆಲ ದಿನಗಳ ಹಿಂದೆ ಎನ್.ಆರ್. ಮೊಹಲ್ಲಾದ ಹಳೇ ಬಡಾವಣೆಯ 52 ವರ್ಷದ ಮಹಿಳೆಯೊಬ್ಬರಲ್ಲಿ ಕಾಲರಾ ದೃಢಪಟ್ಟಿದ್ದು, ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ತೀವ್ರ ಹೊಟ್ಟೆನೋವು, ವಾಂತಿ-ಭೇದಿ ಕಾಣಿಸಿಕೊಂಡ ಕಾರಣ ಮಹಿಳೆಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಬಿಸಿಲಿನ ತೀವ್ರತೆ, ಅಶುಚಿತ್ವ, ಕಲುಷಿತ ನೀರು, ಆಹಾರ ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದ್ದು, ಹಲವು ವರ್ಷಗಳ ಬಳಿಕ ಮೈಸೂರಲ್ಲಿ ಇದೇ ಮೊದಲು ಕಾಲರಾ ದೃಢಪಟ್ಟಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾಲರಾ ಕಾಣಿಸಿಕೊಂಡ ಬಡಾವಣೆ ಸುತ್ತಮುತ್ತಲಿನ ನಿವಾಸಿಗಳ 600ಕ್ಕೂ ಹೆಚ್ಚು ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಆದರೆ ಬೇರೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಈ ಕಾರಣ ಸೋಂಕು ಬಂದ ಮಹಿಳೆಯ ಪ್ರಯಾಣದ ಇತಿಹಾಸ ಪರೀಕ್ಷಿಸಲಾಗುತ್ತಿದೆ. ಇದರಿಂದ ಅವರು ಬೇರೆ ಎಲ್ಲಾದರೂ ನೀರು, ಆಹಾರ ಪದಾರ್ಥ ಸೇವಿಸಿದ್ದರೆ ಎಂಬುದು ತಿಳಿದು ಬರಲಿದೆ ಎಂದು ನಗರಪಾಲಿಕೆ ಆಯುಕ್ತೆ ಡಾ.ಎನ್.ಎನ್.ಮಧು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಜತೆಗೆ ಮೈಸೂರು ನಗರದ ಸುತ್ತಮುತ್ತ ಎಲ್ಲೂ ನೀರಿನಿಂದ ಹರಡುವ ರೋಗಗಳಾಗಲಿ ಅಥವಾ ರೋಗ ಲಕ್ಷಣಗಳಾಗಲಿ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ಜರುಗಿಸುವ ನಿಟ್ಟಿನಲ್ಲಿ ನಗರಪಾಲಿಕೆ ಆರೋಗ್ಯಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವೆ. ಅಗತ್ಯ ಕಂಡು ಬಂದಲ್ಲಿ, ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ಪೂರೈಸುವ ಸಂಬಂದ ಸೂಚನೆ ನೀಡಲಾಗುವುದು. ಜತೆಗೆ ಶುಚಿತ್ವದ ಕಡೆ ಗಮನಹರಿಸುವಂತೆಯೂ ಆದೇಶಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net