

ಹುಣಸೂರು: ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಾಲ್ಕು ನಿರ್ದೇಶಕರ ಎ ತರಗತಿಯ ಸಾಮಾನ್ಯ ಚುನಾವಣೆಯಲ್ಲಿ ನಾಲ್ಕೂ ಸ್ಥಾನಗಳು ಜೆಡಿಎಸ್ ಬೆಂಬಲಿತರ ಪಾಲಾಯಿತು.
ಹಬ್ಬನಕುಪ್ಪೆಯ ಎಚ್.ಪ್ರೇಮ್‌ಕುಮಾರ್, ಗೆರಸನಹಳ್ಳಿಯ ರೇವಣ್ಣ, ಮಧುಗಿರಿ ಕೊಪ್ಪಲು ಗ್ರಾಮದ ಗೋವಿಂದೇಗೌಡ ಮತ್ತು ಗಾವಡಗೆರೆಯ ಹೊನ್ನಪ್ಪರಾವ್ ಕಾಳಿಂಗೆ ಅವಿರೋಧವಾಗಿ ಆಯ್ಕೆಯಾದವರು. ಒಟ್ಟ 12 ಸ್ಥಾನಗಳಿಗೆ ಅ.26ರಂದು ಚುನಾವಣೆ ನಿಗದಿಯಾಗಿತ್ತು. ಅ.20ರಂದು ನಾಮಪತ್ರಗಳ ವಾಪಸ್‌ಗೆ ಅಂತಿಮ ದಿನವಾಗಿತ್ತು. ವಾಪಸ್ ಅವಧಿ ಅಂತ್ಯಗೊಂಡ ನಂತರ ಎ ತರಗತಿ(ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಂದ ಪ್ರತಿನಿಧಿಸುವವರು) ನಾಮಪತ್ರ ಸಲ್ಲಿಸಿದ್ದ ಜೆಡಿಎಸ್‌ನ ನಾಲ್ವರನ್ನು ಹೊರತುಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಉಳಿದ ಮತದಾರರಿಂದ ಆಯ್ಕೆಯಾಗುವ 8 ಸ್ಥಾನಗಳಿಗೆ ಅ.26ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾದ ತಹಸೀಲ್ದಾರ್ ಜೆ.ಮಂಜುನಾಥ್ ಘೋಷಿಸಿದರು.
ಜೆಡಿಎಸ್ ಬೆಂಬಲಿತ ನಾಲ್ವರ ಅವಿರೋಧ ಆಯ್ಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಶಾಸಕ ಜಿ.ಡಿ.ಹರೀಶ್‌ಗೌಡ ಅವರ ರಾಜಕೀಯ ಚಾಣಾಕ್ಷತನ ಕಾಣುತ್ತಿತ್ತು. ಪಕ್ಷದ ಆಕಾಂಕ್ಷಿಗಳೆಲ್ಲರ ಮನವೊಲಿಸಿ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿ ನಿರ್ದೇಶಕ ಕೆ.ಎಸ್.ಕುಮಾರ್ ಸಾಥ್ ನೀಡಿದರು.