ಸಂಪೂರ್ಣ ಮುಳುಗಡೆಯಾದ ಹೊಗೇನಕಲ್ ಫಾಲ್ಸ್

28 HANUR 2
Published on

ಹನೂರು: ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿರುವುದರಿಂದ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ ಸಂಪೂರ್ಣ ಮುಳುಗಿದೆ. ಎರಡೂ ಡ್ಯಾಂಗಳಿಂದ ಹೊರಬರುತ್ತಿರುವ ಜಲರಾಶಿಯಿಂದ ಕಾವೇರಿಯ ಕೊಳ್ಳವು ಮೈದುಂಬಿದೆ. ಕಲ್ಲು ಬಂಡೆಗಳ ಮೇಲೆ ರುದ್ರ ರಮಣೀಯ ದೃಶ್ಯವನ್ನು ಸೃಷ್ಟಿಸಿ, ಧುಮ್ಮಿಕ್ಕುತ್ತಿದ್ದ ಹೊಗನೇಕಲ್ ಫಾಲ್ಸ್ ಸಂಪೂರ್ಣ ಜಲಾವೃತವಾಗಿದೆ. ಬಹು ವರ್ಷದ ನಂತರ ಜಲಪಾತ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದ್ದು, ಹೆಚ್ಚಿನ ಪ್ರಮಾಣದ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯ ಸೇರುತ್ತಿದೆ. ಹಾಗಾಗಿ 120 ಅಡಿ ಎತ್ತರವನ್ನು ಹೊಂದಿರುವ ಈ ಜಲಾಶಯದ ಒಳಹರಿವು 1.47 ಲಕ್ಷ ಕ್ಯೂಸೆಕ್‌ಗೆ ಏರಿದೆ. ನೀರಿನ ಮಟ್ಟ 110 ಅಡಿಗೆ ತಲುಪಿದೆ. ನೀರಿನ ಸಂಗ್ರಹಣಾ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 93 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಈ ಜಲಾಶಯದಿಂದ 1,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಸದ್ಯದಲ್ಲಿಯೇ ಜಲಾಶಯ ಭರ್ತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಹಾಗಾಗಿ 124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಒಳಹರಿವೂ ಅಧಿಕವಾಗಿದೆ. ಅಣೆಕಟ್ಟೆ ಬಹುತೇಕ ಭರ್ತಿಯಾಗಿದೆ.
ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್‌ಗಿಂತಲೂ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬರುವ ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಯಡಕುರಿಯ ಹಾಗೂ ಈ ಭಾಗದಲ್ಲಿ ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net