ಚಾಮರಾಜನಗರ: ಕಾವೇರಿ, ಕಬಿನಿ ನದಿಪಾತ್ರದ ಗ್ರಾಮಗಳಲ್ಲಿ ನೆರೆ ಪ್ರವಾಹದಿಂದಾಗಿ ಮನೆ, ಫಸಲು ನಾಶವಾಗಿದ್ದು ಕೂಡಲೇ ಸರ್ಕಾರ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ಆಗ್ರಹಿಸಿದರು.
ಕಳೆದ ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ಹೊರಬಿಟ್ಟ ಪರಿಣಾಮ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪಾತ್ರದ ದಾಸನಪುರ, ಹಳೇ ಹಂಪಾಪುರ ಹಾಗೂ ಇನ್ನಿತರೆ ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಇದರಿಂದ ಹಲವು ಮನೆಗಳು ಹಾಗೂ ರೈತರ ಫಸಲು ನಾಶವಾಗಿದೆ. ಇದನ್ನು ಸರ್ಕಾರ ಮನಗಂಡು ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೊರ ಬಿಟ್ಟಿರುವ ನೀರು ವ್ಯರ್ಥವಾಗುತ್ತಿದ್ದು, ಈ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸುವ ನಿಟ್ಟಿನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಅತಿ ವೃಷ್ಠಿಯಿಂದಾಗಿ ಈರುಳ್ಳಿ ಬೆಳೆಯು ಬಹುತೇಕ ನಾಶವಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಖಾಯಂ ಸದಸ್ಯ ಹೆಬ್ಬಸೂರು ಬಸವಣ್ಣ, ಕಾರ್ಯಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಸಿ.ಭಾಸ್ಕರ್, ಉಪಾಧ್ಯಕ್ಷ ಗೌಡೇಗೌಡ, ಪ್ರದೀಪ್ ಕುಮಾರ್ ಇದ್ದರು.