ಸೀಲ್‌ಡೌನ್ ಗ್ರಾಮಗಳಲ್ಲಿ ಹಾಲು ಖರೀದಿಗೆ ಜೈ

SHIVAMOGGA MILK download
Published on

ಚಳ್ಳಕೆರೆ: ಕರೊನಾ ಕಾರಣಕ್ಕೆ ತಾಲೂಕಿನ ಕೋಡಿಹಳ್ಳಿ, ಚಿಕ್ಕಹಳ್ಳಿಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಹಾಲು ಖರೀದಿ ಪುನರಾರಂಭಿಸಲು ಶಿವಮೊಗ್ಗ ಹಾಲು ಒಕ್ಕೂಟವು ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಮುನ್ನೂರು ಲೀಟರ್ ಹಾಲು ಬೀದಿಪಾಲು ಎಂಬ ಶೀರ್ಷಿಕೆಯಡಿ ವಿಜಯವಾಣಿ ಮೇ 31ರಂದು ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಹಾಲು ಖರೀದಿಗೆ ಮುಂದಾಗಿದ್ದಾರೆ.

ಇಬ್ಬರಲ್ಲಿ ಕರೊನಾ ಸೋಂಕು ಕಾಣಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಜತೆಗೆ ಎರಡೂ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದರಿಂದ ತಾತ್ಕಾಲಿಕವಾಗಿ ಆ ಪ್ರದೇಶದಲ್ಲಿ ಹಾಲು ಖರೀದಿ ನಿಲ್ಲಿಸಲಾಗಿತ್ತು.

ಗ್ರಾಮಗಳ ಉಳಿದವರನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ ವರದಿ ಬಂದಿತ್ತು. ಆ ಬಳಿಕವೂ ಹಾಲು ಖರೀದಿ ಆರಂಭಿಸದ ಕಾರಣ ನಿತ್ಯ 300 ಲೀ. ಹಾಲು ವ್ಯರ್ಥ ಆಗುತ್ತಿದೆ ಎಂದು ಸ್ಥಳೀಯರು ಗಮನ ಸೆಳೆದಿದ್ದರು.

ಇದೀಗ ಹಾಲು ಖರೀದಿ ಶುರುವಾಗಿದ್ದು ರೈತರಿಗೆ ಖುಷಿಯಾಗಿದೆ. ಇದರೊಂದಿಗೆ ಎರಡೂ ಗ್ರಾಮಗಳಲ್ಲಿ ತಲೆದೋರಿದ್ದ ನೀರಿನ ಸಮಸ್ಯೆಯನ್ನೂ ಪರಿಹರಿಸಲಾಗಿದೆ.

ಹಾಲಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಹಾಲು ಒಕ್ಕೂಟದ ನಿರ್ದೇಶನದಂತೆ ಖರೀದಿ ಶುರುವಾಗಿದೆ. ಗ್ರಾಮಾಡಳಿತದ ಮೂಲಕ ಕುಡಿವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ.
ಎನ್.ಎಚ್.ರಾಜಣ್ಣ
ಮನ್ನೆಕೋಟೆ ಗ್ರಾಪಂ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net