ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

CLK SOCIAL 01
Published on

ಚಳ್ಳಕೆರೆ: ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಸ್ವಚ್ಛತೆ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ಬಾಪೂಜಿ ಬಸವೇಶ್ವರ ಆಸ್ಪತ್ರೆ ಸಹಯೋಗದಲ್ಲಿ ನಗರದ ಎಸ್ಸಿ, ಎಸ್ಟಿ ವಿದ್ಯಾರ್ಥಿ ನಿಲಯಗಳ ಸಿಬ್ಬಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಸತಿ ನಿಲಯದಲ್ಲಿ ಸೇವೆ ಸಲ್ಲಿಸುವವರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳ ಪಾಲನೆ, ಪೋಷಣೆ, ಆಹಾರ ತಯಾರಿಕೆ, ಉಣಬಡಿಸುವಾಗ ಬಹಳ ಎಚ್ಚರ ವಹಿಸಬೇಕು. ಅಡುಗೆ ಕೋಣೆ, ನಿಲಯದ ಎಲ್ಲ ಕೊಠಡಿಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಮಂಜಣ್ಣ ಮಾತನಾಡಿ, ವಿದ್ಯಾರ್ಥಿ ನಿಲಯದ ವ್ಯವಸ್ಥೆ ಕೇವಲ ಊಟ ಮತ್ತು ನಿದ್ರೆಗೆ ಆಧಾರ ಆಗಬಾರದು. ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿಯಾಗಬೇಕು. ಶಾಲೆ ಮತ್ತು ನಿಲಯದ ಸಮಯದಲ್ಲಿ ಪರಿಶ್ರಮಪಡುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪರಿಶಿಷ್ಟ ವರ್ಗ ಇಲಾಖೆಯ ಅಧಿಕಾರಿ ಮಾಲತಿ ಮಾತನಾಡಿ, ಕುಟುಂಬದ ಸಮಸ್ಯೆಗಳಿಂದ ಶಿಕ್ಷಣ ಕುಂಠಿತವಾಗದಂತೆ ಮುಂದುವರಿಸಲು ಇಲಾಖೆ ನೀಡುತ್ತಿರುವ ಸೌಲಭ್ಯ ಸಾರ್ಥಕವಾಗಬೇಕು ಎಂದರು.

ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ.ರಮೇಶ್‌ಗೌಡ, ಬಸವೇಶ್ವರ ಆಸ್ಪತ್ರೆಯ ಡಾ.ಪಾಲಾಕ್ಷ, ನಾರಾಯಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಡಿ.ದಯಾನಂದ್, ನಿಲಯದ ಸಿಬ್ಬಂದಿ ವಿ.ವಿದ್ಯಾ, ಟಿ.ತಿಪ್ಪಮ್ಮ, ಲಕ್ಷ್ಮಕ್ಕ, ರೂಪಾ, ಪಾಪಣ್ಣ, ಲಕ್ಷ್ಮಕ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net