

ಚಳ್ಳಕೆರೆ: ವೇತನ ತಾರತಮ್ಯ ನಿವಾರಣೆ ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಸೋಮವಾರ ಕಪ್ಪು ಪಟ್ಟಿ ಧರಿಸಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷಾ ಕರ್ತವ್ಯ ನಿರ್ವಹಿಸಿದರು.
ವೇತನ ತಾರತಮ್ಯ ಸರಿಪಡಿಸಲು ಕೋರಿ ಅನೇಕ ಬಾರಿ ಹೋರಾಟ ಮಾಡಿ ಸಂಬಂಧಪಟ್ಟ ಸಚಿವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು 2ನೇ ಹೆಚ್ಚುವರಿ ವೇತನ ಮಂಜೂರು ಮಾಡಬೇಕು. ಬಡ್ತಿ ತಾರತಮ್ಯ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಣ್, ತಾಲೂಕು ಅಧ್ಯಕ್ಷ ಕೆ.ಎನ್. ವಸಂತಕುಮಾರ್, ಉಪನ್ಯಾಸಕರಾದ ಎಂ. ರವೀಶ್, ಭಾರತಿ, ವೆಂಕಟೇಶ್‌ಮೂರ್ತಿ, ಕರಿಯಪ್ಪ, ಬೆಳಘಟ್ಟ ನಾಗರಾಜ, ಅಂಜಿನಪ್ಪ, ಮಲ್ಲಿಕಾರ್ಜುನ, ಇರ್ಫಾನ್ ಮತ್ತಿತರರಿದ್ದರು.