ಸಾಮಾಜಿಕ ಅಂತರ ಮರೆತ ಎಪಿಎಂಸಿ

CLK AMPC 19
Published on

ಚಳ್ಳಕೆರೆ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಈಗ ಕರೊನಾ ವೈರಸ್‌ನ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗುವ ಆತಂಕ ಮೂಡಿಸಿದೆ.!

ಭಾನುವಾರ ಜರುಗಿದ ಮಾರುಕಟ್ಟೆ ವಹಿವಾಟಿನ ವೇಳೆ ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ಬಳ್ಳಾರಿ ಸೇರಿ ವಿವಿಧ ರಾಜ್ಯ ವಿವಿಧ ಭಾಗಗಳಿಂದ ಸಾವಿರಾರು ಖರೀದಿದಾರರು ಮತ್ತು ರೈತರು ಆಗಮಿಸಿದ್ದರು. ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಈಚೆಗೆ ನಡೆದ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು, ಕಾರ್ಮಿಕರ ಸಭೆಯಲ್ಲಿ ವಹಿವಾಟಿಗೆ ಕೇವಲ ಜಿಲ್ಲೆಯ ರೈತರು ಮತ್ತು ಖರೀದಿದಾರರಿಗೆ ಅವಕಾಶ ಕಲ್ಪಿಸಲಾಗುವುದು.

ಕಾರ್ಮಿಕರು ಯಾವುದೇ ಆತಂಕವಿಲ್ಲದೆ ಕೆಲಸ ಮಾಡಬಹುದು. ಕಾರ್ಮಿಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದರು.

ಆದರೆ, ಈವರೆಗೂ ಅಂತಹ ಯಾವುದೇ ಸೌಲಭ್ಯ ನೀಡಿಲ್ಲ ಎಂಬುದು ಮಾರುಕಟ್ಟೆ ಕಾರ್ಮಿಕ ಸಂಘದ ಅಧ್ಯಕ್ಷ ಟಿ.ನಿಂಗಣ್ಣ, ಸಿಐಟಿಯು ಸಂಘಟನೆ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಇತರರ ಆರೋಪ.

ಎತ್ತಿನಗಾಡಿ ಕಾರ್ಮಿಕರ ಸಂಘ ಅಧ್ಯಕ್ಷ ಗಾಡಿ ತಿಪ್ಪೇಸ್ವಾಮಿ ಹೇಳಿಕೆ: ಲಾಕ್‌ಡೌನ್ ಪರಿಸ್ಥಿತಿಯನ್ನು ವ್ಯಾಪಾರಿಗಳು, ದಲ್ಲಾಳಿಗಳು ಮತ್ತು ಕೆಲ ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಚೆಕ್ ಪೋಸ್ಟ್ ವ್ಯವಸ್ಥೆ ಇದೆ. ಆದರೂ, ಕೇರಳ, ತಮಿಳುನಾಡು, ಆಂಧ್ರದಿಂದ ಖರೀದಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಸಂಕಷ್ಟದಲ್ಲಿರುವ ರೈತರಿಂದ 2-3 ಸಾವಿರ ರೂಪಾಯಿಗೆ ಖರೀದಿ ಮಾಡಿಕೊಂಡು 8-10 ಸಾವಿರಕ್ಕೆ ಮಾರಾಟ ಮಾಡಿಕೊಳ್ಳುವ ಖರೀದಿದಾರರಿಗೆ ಸ್ಥಳೀಯ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ.

ನಗರಸಭೆ ಮಾಜಿ ಸದಸ್ಯ ಜೆ.ಕೆ.ರವಿ ಹೇಳಿಕೆ: ಸ್ಥಳೀಯ ರೈತರ ಉತ್ಪನ್ನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಆಂಧ್ರದಿಂದ ಶೇಂಗಾ, ಬಳ್ಳಾರಿ ಜಿಲ್ಲೆಯಿಂದ ಮೆಣಸಿನಕಾಯಿ ಮಾರಾಟ ಮಾಡಲು ರೈತರು ಬಂದಿದ್ದಾರೆ. ಇದಕ್ಕೆ ಬೆಂಬಲ ನೀಡಿರುವ ಅಧಿಕಾರಿಗಳು ಯಾರು ಎಂಬುದು ಬಹಿರಂಗವಾಗಬೇಕು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net