ಚಿತ್ತಾರ ಜೋಳಿಗೆ ಕವನ ಸಂಕಲನ ಬಿಡುಗಡೆ

26
Published on

ಮೈಸೂರು: ಲೇಖಕ ಪ್ರೊ.ಎಂ.ಎಸ್.ಶೇಖರ್ ಅವರು ರಚಿಸಿರುವ ‘ಚಿತ್ತಾರ ಜೋಳಿಗೆ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ನಗರದ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿರುಚಿ ಪ್ರಕಾಶನದಿಂದ ಹೊರ ತರಲಾದ ಕೃತಿಯನ್ನು ವಿಮರ್ಶಕಿ ಎಂ.ಎಸ್.ಆಶಾದೇವಿ ಬಿಡುಗಡೆಗೊಳಿಸಿ, ಇತಿಹಾಸ ಬದಲಾಗಲ್ಲ. ಇತಿಹಾಸ ನೋಡುವ ನೋಟವನ್ನು ಚಿತ್ತಾರ ಜೋಳಿಗೆ ಬದಲಿಸುತ್ತದೆ. ಕವಿಯ ಹಿಮ್ಮುಖ ಚಲನೆಯಲ್ಲಿ ಬದುಕಿನ ಚೆಲುವಿದೆ ಎಂದು ಬಣ್ಣಿಸಿದರು.

ಪ್ರೊ.ಎಂ.ಎಸ್.ಶೇಖರ್ ಅವರ ಕವಿತೆಗಳಲ್ಲಿ ಶಕ್ತಿ ಮತ್ತು ಸೌಂದರ್ಯ ಇದೆ. ಜೀವ ಸಂವಾದದಲ್ಲಿ ಕವಿತೆಗಳು ಹುಟ್ಟಿವೆ. ಸಹಜವಾದ ಅಂತಃಕರಣವೂ ಇದೆ. ನಮ್ಮ ಸಾಂಸ್ಕೃತಿಯ ಇತಿಹಾಸ ಕಟ್ಟಿಕೊಳ್ಳುವ ಅನಿವಾರ್ಯತೆಯ ಬಗ್ಗೆ ಕವಿತೆಗಳು ಮಾತಾಡುತ್ತವೆ ಎಂದರು.

ವರ್ಚುವಲ್ ಮೂಲಕ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಎಂ.ಎಸ್.ಶೇಖರ್ ದಲಿತ ಸಾಹಿತ್ಯದ ಭಿನ್ನವಾಗದ ಜಗತ್ತನ್ನು ಕಟ್ಟಿಕೊಡುತ್ತಿದ್ದಾರೆ. ಶೋಷಿತ ವರ್ಗದ ಕುಲ ಪುರಾಣ, ಸ್ಥಳ ಪುರಾಣಗಳಿಂದ ಕವಿತೆ ಕಟ್ಟುತ್ತಾರೆ. ಕಳ್ಳು ಬಳ್ಳಿ ಕವಿತೆಗಳು. ದಲಿತ ಒಳಗಿನ ಚಿತ್ರಣ ಶೋಷಣೆಯ ಜಗತ್ತು ಅಲ್ಲ ಸಂಭ್ರಮವನ್ನು ದಟ್ಟವಾಗಿ ಕಟ್ಟಿದ್ದಾರೆ ಎಂದರು.

ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಚ.ಸರ್ವಮಂಗಳಾ, ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ಕೃತಿ ಕುರಿತು ಮಾತನಾಡಿದರು. ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಲೇಖಕ ಚಿಕ್ಕಮಗಳೂರು ಗಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net