

ಲಿಂಗಸುಗೂರು: ತಾಲೂಕಿನ ಚಿತ್ತಾಪುರ ಗ್ರಾಮದ ಜನತೆಗೆ ಕೃಷ್ಣಾ ನದಿ ನೀರು ಪೂರೈಸಬೇಕೆಂದು ಒತ್ತಾಯಿಸಿ ಡಾ.ಅಂಬೇಡ್ಕರ್ ಸೇನೆ ಕಾರ್ಯಕರ್ತರು ಮಂಗಳವಾರ ಎಸಿ ಕಚೇರಿಯ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಜೆಜೆಎಂ ಕಾಮಗಾರಿ ತಂದಿಟ್ಟ ಸಂಕಷ್ಟ
ಕಳೆದ ವರ್ಷ ಬೇಸಿಗೆ ವೇಳೆ ಗ್ರಾಮದ ಜನರು ಬೋರ್‌ವೆಲ್ ನೀರು ಸೇವಿಸಿ ವಾಂತಿ ಭೇದಿಯಿಂದ ಬಳಲಿದ್ದರು. ಆಗ ಆರೋಗ್ಯ ಇಲಾಖೆ ಗ್ರಾಮದ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ನೀಡಿತ್ತು. ಈ ನೀರಿಂದ ಜನರು ಮಂಡಿನೋವು ಸೇರಿ ಇತರ ಸಮಸ್ಯೆಗಳಿಂದ ಬಳಲುವಂತಾಗಿದೆ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಕೊರೆದ ಬೋರ್‌ವೆಲ್ ನೀರು ಸಹ ಯೋಗ್ಯವಾಗಿಲ್ಲ. ಗ್ರಾಮವು ಬಸವಸಾಗರ ಜಲಾಶಯ ಹಿನ್ನೀರಿನ ಕೃಷ್ಣಾ ನದಿ ಹತ್ತಿರದಲ್ಲಿದ್ದರೂ ಕುಡಿವ ನೀರಿನ ಸಮಸ್ಯೆಯಿಂದ ಬಳಲುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷ್ಣಾ ನದಿಯಿಂದ ಪೈಪ್‌ಲೈನ್ ಕಾಮಗಾರಿ ಕೈಗೊಂಡಿದ್ದು, ಜೆಸ್ಕಾಂ ಇಲಾಖೆ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕುಡಿವ ನೀರು ಪೂರೈಕೆಗೆ ಮೋಟಾರ್ ಪಂಪ್, ಟಿಸಿ, ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಜಟ್ಟೆಪ್ಪ, ಪ್ರಕಾಶ ಕುರಿ, ಭೀಮಣ್ಣ ತೊಗರಿ, ಬಲರಾಮ ತಂಗಡಗಿ, ಗದ್ದೆಪ್ಪ, ಅನಿಲ್ ಕುಮಾರ, ಮುದಿಯಪ್ಪ, ಕುಮಾರ, ಭರಮಣ್ಣ, ರವೀಂದ್ರ ಇತರರಿದ್ದರು.