

ಕಾರವಾರ: ರಾಜ್ಯದ ಅತಿ ದೊಡ್ಡ ಗ್ರಾಪಂಗಳಲ್ಲಿ ಒಂದಾದ ಚಿತ್ತಾಕುಲಾ ಗ್ರಾಮ ಪಂಚಾಯಿತಿಯು ಕೆರೆಯೊಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಗಜೇಂದ್ರ ನಾಯ್ಕ ಹಾಗೂ ಇತರರು, ಈ ಸಂಬಂಧ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ಮನವಿ ನೀಡಿದ್ದು, ಏ.26 ರ ಒಳಗೆ ವ್ಯವಸ್ಥೆ ಸರಿ ಮಾಡದೇ ಇದ್ದಲ್ಲಿ, ಗ್ರಾಪಂ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಪಂನಲ್ಲಿ ಮನೆ, ಮನೆ ಕಸ ಸಂಗ್ರಹ ವ್ಯವಸ್ಥೆ ಇದೆ. ಆದರೆ, ಅದರ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿಲ್ಲ. ತ್ಯಾಜ್ಯ ವಿಲೇವಾರಿ ಯಂತ್ರ ಪದೇ ಪದೇ ಕೈ ಕೊಡುತ್ತದೆ. ಹಾಗಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ಕಸಕ್ಕೆ ಬೆಂಕಿ ಹಾಕುತ್ತಿದ್ದಾರೆ. ಹಸಿ ಕಸವನ್ನು ಪಕ್ಕದ ಕಾಕರತಳೆ ಕೆರೆಗೆ ಸೇರಿಸಲಾಗುತ್ತದೆ.
ಕೆರೆಯ ಅತಿ ಸಮೀಪದಲ್ಲಿ ಅಂಗನವಾಡಿ, ಶಾಲೆ, ಹೈಸ್ಕೂಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಮೀನು ಮಾರುಕಟ್ಟೆ, ಮಾಂಸದ ಮಾರುಕಟ್ಟೆ ಇದೆ. ಜನವಸತಿ ಪ್ರದೇಶವಿದೆ. ಕೆರೆ ತ್ಯಾಜ್ಯದಿಂದ ತುಂಬಿ ನಾರುತ್ತಿದೆ. ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಗ್ರಾಪಂ ವ್ಯಾಪ್ತಿಯ ಕಾಕರತಳೆ ಕೆರೆಯಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದೇವೆ. ಸಾಕಷ್ಟು ಅಽಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಈಗಾಗಲೇ ಗ್ರಾಪಂನಲ್ಲಿ 12 ಕ್ಕೂ ಹೆಚ್ಚು ಬಹು ಮಹಡಿ ಕಟ್ಟಡಗಳಿವೆ. ಮತ್ತೆ ಬಹುಮಹಡಿ ಕಟ್ಟಡ ಕಟ್ಟಲು ಗ್ರಾಪಂ ಅನುಮತಿ ನೀಡುತ್ತಿದೆ. ಗ್ರಾಪಂನ ನಿರ್ಲಕ್ಷ್ಯ ಖಂಡನೀಯ ಎಂದರು.ಗ್ರಾಪಂ ಸದಸ್ಯ ಅಶೋಕ ರಾಣೆ, ಗ್ರಾಮಸ್ಥರಾದ ಸುನೀಲ ಐಗಳ, ಗೋವಿಂದ ರಾಣೆ, ಪುರುಷೋತ್ತಮ ರಾಣೆ, ಗುರು ಸಾವಂತ ಸುದ್ದಿಗೋಷ್ಠಿಯಲ್ಲಿದ್ದರು.