ಕರೊನಾಗೆ ಚಿತ್ರಾವತಿ ಜಾತ್ರೆ ರದ್ದು : ಸರಳವಾಗಿ ಸುಬ್ರಮಣ್ಯೇಶ್ವರಸ್ವಾಮಿ ಪೂಜೆ ರಾಸುಗಳ ಸಂತೆಗೂ ಅಡ್ಡಿ

31CBP1
Published on

ಚಿಕ್ಕಬಳ್ಳಾಪುರ : ಕರೊನಾ ಹಿನ್ನೆಲೆಯಲ್ಲಿ ತಾಲೂಕಿನ ಚಿತ್ರಾವತಿಯ ಶ್ರೀ ಸುಬ್ರಮಣ್ಯೇಶ್ವರಸ್ವಾಮಿ ಆಲಯದಲ್ಲಿ ಜಾತ್ರಾ ಮಹೋತ್ಸವವು ರದ್ದಾಗಿದೆ.

ತಾಲೂಕು ಆಡಳಿತ, ತಾಪಂ, ಜಾತ್ರಾ ಮಹೋತ್ಸವ ಸೇವಾ ಸಮಿತಿಯಿಂದ ಪ್ರತಿ ವರ್ಷ ಚಿತ್ರಾವತಿ ಜಾತ್ರೆ ಅದ್ದೂರಿಯಾಗಿ ನೆರವೇರುತ್ತಿತ್ತು. ಘಾಟಿ ಸುಬ್ರಮಣ್ಯೇಶ್ವರಸ್ವಾಮಿ ಜಾತ್ರೆಯ ಬಳಿಕ ಷಷ್ಠಿ (ೆೆ.6 ಮತ್ತು 7ರಂದು) ದಿನದಂದು ನಡೆಯುತ್ತಿದ್ದ ಹೆಸರಾಂತ ಈ ಜಾತ್ರೆಗೆ ರಾಜ್ಯ ಮಾತ್ರವಲ್ಲದೇ ಆಂಧ್ರ, ತಮಿಳುನಾಡು ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮ, ತಿಂಡಿ ತಿನಿಸುಗಳ ಅಂಗಡಿ ಮತ್ತು ಹೆಚ್ಚಿನ ದಟ್ಟಣೆಯಿಂದ ಜಾತ್ರೆ ಗಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ಕರೊನಾ ಸೋಂಕಿನ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ರದ್ದುಪಡಿಸಲಾಗಿದೆ.

ರಾಸುಗಳ ಸಂತೆಗೂ ಕರೊನಾ ಅಡ್ಡಿ: ಚಿತ್ರಾವತಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವದ ಅಂಗವಾಗಿ ನಡೆಯುವ ದನಗಳ ವಾರದ ಸಂತೆಯು ವಿಶೇಷತೆಯನ್ನು ಹೊಂದಿದೆ. ಅವಿಭಜಿತ ಕೋಲಾರ ಜಿಲ್ಲೆ, ಆಂಧ್ರದ ಹಿಂದೂಪುರ ಸೇರಿ ವಿವಿಧೆಡೆಯಿಂದ ರಾಸುಗಳನ್ನು ಕರೆದುಕೊಂಡು ಬಂದು ಮಾರುವ, ಒಳ್ಳೆಯ ರಾಸುಗಳನ್ನು ಖರೀದಿಸುವ ವ್ಯವಹಾರ ಜೋರಾಗಿ ನಡೆಯುತ್ತಿತ್ತು. ಸಾಮಾನ್ಯವಾಗಿ ಒಂದು ರಾಸುವಿಗೆ 25 ಸಾವಿರ ರೂ.ಗಳಿಂದ 1 ಲಕ್ಷ ರೂ ವರೆಗೂ ಬೆಲೆ ಕೇಳಿ ಬರುತ್ತಿತ್ತು. ಆದರೆ, ಈ ಬಾರಿಯೂ ಕರೊನಾ ಅಡ್ಡಿಯಾಗಿ, ರೈತರು ನಿರಾಸೆ ಅನುಭವಿಸುವಂತಾಗಿದೆ.

ವ್ಯಾಪಾರ ವಹಿವಾಟು ನಷ್ಟ: ಜಾತ್ರೆ ಹಿನ್ನೆಲೆಯಲ್ಲಿ ತಲೆ ಎತ್ತುತ್ತಿದ್ದ ತಿಂಡಿ ತಿನಿಸು, ಆಟಿಕೆ ವಸ್ತುಗಳ ಮಾರಾಟ ಅಂಗಡಿ, ಹೋಟೆಲ್, ವಾಹನ ನಿಲುಗಡೆ, ಚಪ್ಪಲಿ ಸ್ಟ್ಯಾಂಡ್, ರಾಸುಸಂತೆ, ಮನರಂಜನಾತ್ಮಕ ಸ್ಪರ್ಧೆಗಳ ಯಂತ್ರೋಪಕರಣಗಳ ಅಳವಡಿಕೆ ಸೇರಿ ವಿವಿಧ ವಹಿವಾಟಿಗೆ ಬಾಡಿಗೆ ಶುಲ್ಕ ಸಂಗ್ರಹಕ್ಕೆ ಟೆಂಡರ್ ಸೇರಿ ನಾನಾ ಮೂಲಗಳಿಂದ ಒಳ್ಳೆಯ ಲಾಭ ಸಿಗುತ್ತಿತ್ತು. ಮಹೋತ್ಸವದಲ್ಲಿ ಭಾಗವಹಿಸಿದ್ದ ಜನರ ಪ್ರಯಾಣದಿಂದ ಸಾರಿಗೆ ಮತ್ತು ಖಾಸಗಿ ಸಂಸ್ಥೆಯ ವಾಹನಗಳಿಗೆ ಹಣ ಸಂಪಾದನೆಯಾಗುತ್ತಿತ್ತು. ಆದರೆ, ಕರೊನಾದಿಂದ ಧಾರ್ಮಿಕ ಚಟುವಟಿಕೆಗೆ ಕಡಿವಾಣ ಬಿದ್ದಿರುವುದರ ಜತೆಗೆ ಆರ್ಥಿಕವಾಗಿಯೂ ನಷ್ಟ ಉಂಟಾಗಿದೆ.

ಶಾಸ್ತ್ರಕ್ಕೆ ಸರಳ ಪೂಜೆ: ಜಾತ್ರೆ ರದ್ದಾದರೂ ಸರಳವಾಗಿ ಜಾತ್ರೆಯ ದಿನದಂದು ಸುಬ್ರಮಣ್ಯೇಶ್ವರಸ್ವಾಮಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ. 50ಕ್ಕೂ ಹೆಚ್ಚು ಮಂದಿ ಸೇರ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.

ಚಿತ್ರಾವತಿ ಜಾತ್ರೆಗೆ ಆಂಧ್ರ, ತಮಿಳುನಾಡು ಸೇರಿ ವಿವಿಧ ಭಾಗಗಳಿಂದ ಸಾವಿರಾರು ಜನ ಭಾಗವಹಿಸುವುದು ಸಾಮಾನ್ಯ. ಆದ ಕಾರಣ ಕರೊನಾ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಜಾತ್ರೆಯನ್ನು ರದ್ದುಪಡಿಸಲಾಗಿದೆ. ಹರ್ಷವರ್ಧನ, ತಾಪಂ ಇಒ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net