

ಮೈಸೂರು: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರಥಮ ಬಾರಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜ.26 ರಿಂದ 28ರವರೆಗೆ ‘ಮೈಸೂರು ಫೆಸ್ಟ್’ ಹಮ್ಮಿಕೊಳ್ಳಲಾಗಿದ್ದು, ಈ ಉತ್ಸವಕ್ಕೆ ಚಿತ್ರಸಂತೆ ಹಾಗೂ ಚಿತ್ರಕಲಾ ಸ್ಪರ್ಧೆ ರಂಗು ತುಂಬಲಿದೆ.
ನಗರದ ಮಾನಸಗಂಗೋತ್ರಿಯಲ್ಲಿ ಜ.26 ರಂದು ಚಿತ್ರಸಂತೆ, 27 ರಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾ ಗಿದೆ. ಸ್ಪರ್ಧೆ ನಡೆಯುವ ಸ್ಥಳದಲ್ಲಿ ಜನಾಕರ್ಷಣೆಗೆ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗ್ಗಿ ನಿಂದ ಸಂಜೆವರೆಗೆ ನಡೆಯಲಿದೆ. ಜ.27, 28 ರಂದು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಖ್ಯಾತನಾಮ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ಕಲಾವಿದರನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದ್ದು, ದಸರಾ ನಂತರ ಮೈಸೂರಿಗೆ ‘ಮೈಸೂರು ಫೆಸ್ಟ್’ ಬಹುದೊಡ್ಡ ಮನರಂಜನೆಯನ್ನು ಹೊತ್ತು ತರಲಿದೆ.
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ: ‘ನಮ್ಮ ಸಂಸ್ಕೃತಿ, ನಿಮ್ಮ ತಾಣ- ಮೈಸೂರು’ ಪರಿಕಲ್ಪನೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಜ.27 ರಂದು ಮೈಸೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಂಭಾಗ ಏರ್ಪಡಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಜ.20 ರೊಳಗೆ ಅರ್ಜಿ ಸಲ್ಲಿಬೇಕು. ಆಸಕ್ತರು https://forms.gle/BbWdJUzv1uFAeuXb8 ಈ ಲಿಂಕ್ ಬಳಸಿ ಅರ್ಜಿ ಸಲ್ಲಿಸಬೇಕು.
ನಿಯಮಗಳೇನು?: 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾರ್ಥಿಗಳು ತಮ್ಮ ಶಾಲೆಯ ಐಡಿ ಕಾರ್ಡ್ ತರುವುದು ಕಡ್ಡಾಯ. ಡ್ರಾಯಿಂಗ್ ಪೇಪರ್‌ಅನ್ನು (11 x 15 ಇಂಚು) ಸ್ಥಳದಲ್ಲೇ ಒದಗಿಸಲಾಗುವುದು. ನೀರಿನ ಬಾಟಲಿ, ಪೇಂಟಿಂಗ್ ಸಾಮಾಗ್ರಿಗಳು, ಡ್ರಾಯಿಂಗ್ ಬೋರ್ಡ್, ಒರೆಸುವ ಬಟ್ಟೆ ಮತ್ತು ಇತರೆ ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಚಿತ್ರ ಬಿಡಿಸಲು 90 ನಿಮಿಷಗಳು ಅವಧಿ (ಬೆಳಗ್ಗೆ 10 ರಿಂದ 11.30) ನಿಗದಿ ಮಾಡಲಾಗಿದ್ದು, ನಿಗದಿತ ಅವಧಿಯೊಳಗೆ ಚಿತ್ರವನ್ನು ಪೂರ್ಣಗೊಳಿಸಿರಬೇಕು. ಪೇಂಟಿಂಗ್ ಹೊಸದಾಗಿರಬೇಕು. ಈ ಮೊದಲು ಎಲ್ಲಿಯೂ ಪ್ರದರ್ಶನವಾಗಿರಬಾರದು ಹಾಗೂ ಪರಿಕಲ್ಪನೆ, ಗುಣಮಟ್ಟ, ಕೌಶಲ್ಯ ಮತ್ತು ಕಲಾತ್ಮಕತೆಯ ಆಧಾರದ ಮೇಲೆ ನಿರ್ಧಾರ ಮಾಡಿ ಅಂತಿಮ ತೀರ್ಪು ನೀಡಲಾಗುತ್ತದೆ. ಸ್ಪರ್ಧೆ ನಡೆಯುವ ಸಮಯದಲ್ಲಿ ಪಾಲಕರಿಗೆ ಸ್ಥಳಕ್ಕೆ ತೆರಳಲು ಅವಕಾಶವಿಲ್ಲ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಬೈಸಿಕಲ್ ಮತ್ತು ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಗುವುದು.
ಚಿತ್ರಕಲೆ ಸ್ಪರ್ಧೆಗೆ ಆನ್‌ಲೈನ್ ನೋಂದಣಿ ಕಡ್ಡಾಯ. ಮೊದಲು ನೋಂದಾಯಿಸಿದ 150 ರಿಂದ 200ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಚಿತ್ರಕಲೆ ಸ್ಪರ್ಧೆಗೆ ಸ್ಥಳಾವಕಾಶ ಕಲ್ಪಿಸಲಾಗುವುದು. ಜನವರಿ 23 ರಂದು ಅಂತಿಮ ಸ್ಪರ್ಧಿಗಳ ಪಟ್ಟಿಯನ್ನು ಪ್ರವಾಸೋದ್ಯಮ ಇಲಾಖೆಯ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಪೇಜ್ visit_mysuru ನಲ್ಲಿ ಪ್ರಕಟಿಸಲಾಗುವುದು. ಸ್ಥಳದಲ್ಲಿ ನೋಂದಣಿಗೆ ಅವಕಾಶವಿಲ್ಲ. ಮಾಹಿತಿಗೆ ಮೊ: 7411564510 ಸಂಪರ್ಕಿಸಬಹುದು.
26ಕ್ಕೆ ಕಲಾವಿದರಿಂದ ಚಿತ್ರಸಂತೆ
ಮಾನಸಗಂಗೋತ್ರಿಯ ಕ್ಲಾಕ್‌ಟವರ್ ಮುಂಭಾಗ ಜ.26 ಚಿತ್ರಸಂತೆ ಹಮ್ಮಿಕೊಳ್ಳಲಾಗಿದ್ದು, ಈ ಚಿತ್ರಸಂತೆಯಲ್ಲಿ ನಾಡಿನ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಚಿತ್ರಸಂತೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. ರಾಜ್ಯದ ವಿವಿಧೆಡೆಯಿಂದ 110 ಕಲಾವಿದರು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಆಯ್ದ 30 ರಿಂದ 45 ಕಲಾವಿದರಿಗೆ ಭಾಗವಹಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ. ಚಿತ್ರಸಂತೆಯಲ್ಲಿ ಕಲಾವಿದರು ಸ್ಥಳದಲ್ಲಿಯೇ ಚಿತ್ರಬಿಡಿಸುವ ಜತೆಗೆ ತಾವು ಈಗಾಗಲೇ ಬಿಡಿಸಿ ರುವ ಚಿತ್ರಗಳ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗುವುದು. ಪ್ರತಿ ಕಲಾವಿದರಿಗೆ ಪ್ರತ್ಯೇಕವಾದ ಸ್ಟಾಲ್‌ಗಳನ್ನು ನಿರ್ಮಾಣ ಮಾಡಿಕೊಡಲಾಗುವುದು.
‘ಮೈಸೂರು ಫೆಸ್ಟ್’ ಪ್ರಯುಕ್ತ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಕರ್ಷಿಸಲು ಜ.26 ರಿಂದ 28ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಕಾರ್ಯಕ್ರಮಗಳನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ‘ಮೈಸೂರು ಫೆಸ್ಟ್’ಗೆ ರಂಗು ತುಂಬಲು ಚಿತ್ರಸಂತೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗುವುದು.
ಟಿ.ಕೆ. ಹರೀಶ್, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ