ಬಣ್ಣಗಳ ಲೋಕ ತೆರೆದಿಡುವ ಚಿತ್ರಸಂತೆ: ಕುಮಾರಕೃಪಾ ರಸ್ತೆಯಲ್ಲಿ 5ರಿಂದ 10ರವರೆಗೆ ಆಯೋಜನೆ, ನೇಗಿಲಯೋಗಿಗೆ ಸಮರ್ಪಣೆ

Chitra 3 jan 20
Published on

ಬೆಂಗಳೂರು: ಚಿತ್ರಕಲಾ ಪರಿಷತ್ತು ಜ.5ರಿಂದ 10ರವರೆಗೆ ಕುಮಾರಕೃಪಾ ರಸ್ತೆಯಲ್ಲಿ 17ನೇ ಚಿತ್ರಸಂತೆ 2020 ಏರ್ಪಡಿಸಿದೆ. ಈ ಬಾರಿ ‘ನೇಗಿಲಯೋಗಿ ರೈತರಿಗೆ’ ಚಿತ್ರಸಂತೆ ಸಮರ್ಪಣೆಗೊಳ್ಳುತ್ತಿದೆ.

ದೇಶದಲ್ಲೇ ಅತಿಹೆಚ್ಚು ಜನ ಭೇಟಿ ನೀಡುವ ಚಿತ್ರಸಂತೆಯನ್ನು 16 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಮಹಾತ್ಮ ಗಾಂಧಿ 150ನೇ ಜನ್ಮದಿನದ ಅಂಗವಾಗಿ ಕಳೆದ ಆವೃತ್ತಿಯನ್ನು ಗಾಂಧೀಜಿಗೆ ಸಮರ್ಪಿಸಲಾಗಿತ್ತು. 17ನೇ ಆವೃತ್ತಿಯನ್ನು ರೈತರಿಗೆ ಅರ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಬೆಳಗ್ಗೆ 10.30ಕ್ಕೆ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಮೂವರು ಡಿಸಿಎಂಗಳು, ಹಲವು ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1,300 ಕಲಾವಿದರು ಭಾಗಿ: ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು 2,600 ಕಲಾವಿದರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 1,300 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಇವರ ಪೈಕಿ 40 ಜನ ಅಂಗವಿಕಲ ಕಲಾವಿದರಿದ್ದಾರೆ. 18 ರಾಜ್ಯಗಳ 500 ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಹೊರರಾಜ್ಯದ ಕಲಾವಿದರಿಗೆ ಪರಿಷತ್ ವತಿಯಿಂದ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ಕಲಾವಿದರಿಂದ 500 ರೂ. ಶುಲ್ಕ ಪಡೆಯಲಾಗಿದೆ. ಉಳಿದಂತೆ ಬೇರೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

4ರಂದು ಚಿತ್ರಕಲಾ ಸಮ್ಮಾನ್ ಪ್ರದಾನ

ಚಿತ್ರಕಲೆಯಲ್ಲಿ ಉತ್ತಮ ಸಾಧನೆ ಮಾಡಿದ ಕಲಾವಿದರಿಗೆ ಚಿತ್ರಕಲಾ ಪರಿಷತ್​ನಿಂದ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಚಿತ್ರಸಂತೆಯ ಮುನ್ನ ದಿನ ಶನಿವಾರವೇ (ಜ.4) ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂ. ಆರ್ಯಮೂರ್ತಿ ಪ್ರಶಸ್ತಿಯನ್ನು ಎಸ್. ಕೃಷ್ಣಪ್ಪ, ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿಯನ್ನು ಎಚ್.ಎನ್. ಸುರೇಶ್, ಡಿ. ದೇವರಾಜು ಅರಸು ಪ್ರಶಸ್ತಿಯನ್ನು ಗಣೇಶ್ ಸೋಮಯಾಜಿ ಮತ್ತು ವೈ. ಸುಬ್ರಮಣ್ಯರಾಜು ಪ್ರಶಸ್ತಿಯನ್ನು ವಿಜಯ ಹಾಗರಗುಂಡಗಿ ಅವರಿಗೆ ನೀಡಲಾಗುತ್ತದೆ. ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಎಸ್. ನಂಜುಂಡರಾವ್ ಪ್ರಶಸ್ತಿಯನ್ನು ಹಿರಿಯ ಕಲಾವಿದ ಆರ್.ಬಿ. ಭಾಸ್ಕರನ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಅಂದು ಸಂಜೆ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಪ್ರಶಸ್ತಿ ವಿತರಿಸುವರು. ಹಿರಿಯ ಕಲಾವಿದ ಪ್ರೊ. ಪ್ರಭಾಕರ್ ಕೊಲ್ಟೆ ಮತ್ತಿತರರು ಉಪಸ್ಥಿತರಿರುವರು ಎಂದು ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ವಿವರಿಸಿದರು.

2ರಿಂದ 3 ಕೋಟಿ ರೂ. ವಹಿವಾಟು ನಿರೀಕ್ಷೆ

ವಾಟರ್ ಪೇಂಟಿಂಗ್, ಆಯಿಲ್ ಪೇಂಟಿಂಗ್, ಶಿಲ್ಪಕಲೆ ಸೇರಿ ಹಲವು ಪ್ರಕಾರದ ಚಿತ್ರಕಲೆಗಳು ಪ್ರದರ್ಶನಗೊಳ್ಳುತ್ತಿವೆ. ಗಾಂಧಿಭವನ, ಕ್ರೆಸೆಂಟ್ ರಸ್ತೆ, ಚಿತ್ರಕಲಾ ಪರಿಷತ್ ರಸ್ತೆಗಳಲ್ಲಿ 20 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರದರ್ಶನವಿರಲಿದೆ. 5 ದಿನಗಳಲ್ಲಿ 4 ಲಕ್ಷ ಜನ ಭೇಟಿ ನೀಡುವ ಹಾಗೂ 2ರಿಂದ 3 ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದರು.

ಕೃಷಿ ಪರಿಕರಗಳ ಪ್ರದರ್ಶನ

ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಷತ್ತಿನ ಗಾಂಧಿ ಕುಟೀರದಲ್ಲಿ ರೈತರು ಬಳಸುವ ವಸ್ತುಗಳು, ಉಡುಗೆ ಮತ್ತು ಕೃಷಿ ಪರಿಕರಗಳನ್ನು ಪ್ರದರ್ಶಿಸಲಾಗುತ್ತಿದೆ. ಹಳೇ ಮೈಸೂರು ಭಾಗ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಳಸುವ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದ್ದು ಅವನ್ನು ಪ್ರದರ್ಶಿಸಲಾಗುತ್ತಿದೆ.

ಚಿತ್ರಸಂತೆ ವಿಶೇಷತೆ

  • 100 ರೂ.ನಿಂದ ಲಕ್ಷಾಂತರ ರೂ. ಬೆಲೆಯ ಕಲಾಕೃತಿಗಳ ಮಾರಾಟ
  • ಸಂತೆ ನಡೆಯುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಅಗ್ನಿಶಾಮಕ ದಳ ವಾಹನ, ಆಂಬುಲೆನ್ಸ್​ಗಳ ನಿಯೋಜನೆ
  • ಆಯಾದಿನದ ತ್ಯಾಜ್ಯವನ್ನು ರಾತ್ರಿಯೇ ವಿಲೇವಾರಿಗೆ ಕ್ರಮ
  • ಕಾರ್ಡ್ ಮೂಲಕ ಹಣ ಪಾವತಿ ವ್ಯವಸ್ಥೆ ಹಾಗೂ ಎಸ್​ಬಿಐ ಮತ್ತು ಕೆನರಾ ಬ್ಯಾಂಕ್​ಗಳಿಂದ ಎಟಿಎಂ ವ್ಯವಸ್ಥೆ
  • ಭಾರತೀಯ ಸೇವಾದಳದ ಆವರಣ, ಕ್ರೆಸೆಂಟ್ ಮತ್ತು ರೇಸ್​ಕೋರ್ಸ್ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ

ಏಪ್ರಿಲ್​ನಲ್ಲಿ ಭಾರತೀಯ ಕಲಾ ಮೇಳ

ಚಿತ್ರಕಲಾ ಪರಿಷತ್ತಿನಲ್ಲಿ ಏ.24ರಿಂದ 26ರವರೆಗೆ ‘ಭಾರತೀಯ ಕಲಾ ಮೇಳ’ ಆಯೋಜಿಸಲಾಗುತ್ತಿದೆ. ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನಲ್ಲಿ ಮೇಳ ಆಯೋಜಿಸಲಾಗುತ್ತಿದೆ. ದೇಶದ ಆಯ್ದ 300ರಿಂದ 400 ಕಲಾವಿದರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ ನಲ್ಲಿ ‘ವಿಶ್ವ ವಾಟರ್ ಕಲರ್ ಮೇಳ’ ನಡೆಯಲಿದ್ದು, 20ಕ್ಕೂ ಹೆಚ್ಚು ದೇಶದ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಶಂಕರ್ ತಿಳಿಸಿದರು.

ಪ್ರವಾಸಿತಾಣಗಳ ಮಾಹಿತಿ

ಪ್ರವಾಸೋದ್ಯಮ ಇಲಾಖೆ ಮೊದಲ ಬಾರಿಗೆ ಚಿತ್ರಸಂತೆಯ ಸಹಭಾಗಿತ್ವ ವಹಿಸುತ್ತಿದೆ. ಉನ್ನತ ಶಿಕ್ಷಣ ಇಲಾಖೆ -ಠಿ;30 ಲಕ್ಷ ದೇಣಿಗೆ ನೀಡಿದೆ. ಪ್ರವಾಸೋದ್ಯಮ ಇಲಾಖೆ ರಾಜ್ಯದ 30 ಜಿಲ್ಲೆಗಳ ಪ್ರವಾಸಿ ತಾಣಗಳ ಲ್ಯಾಂಡ್​ಸ್ಕೇಪ್ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಎತ್ತಿನಗಾಡಿ ಮಾದರಿಯ ವೇದಿಕೆ

ರೈತಗೀತೆಯಲ್ಲಿನ ‘ನೇಗಿಲ ಕುಲದೊಳಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಸಾಲನ್ನು 17ನೇ ಚಿತ್ರಸಂತೆಯ ಧ್ಯೇಯವಾಕ್ಯವನ್ನಾಗಿಸಲಾಗಿದೆ. ಜತೆಗೆ ಕಾರ್ಯ ಕ್ರಮದ ಮುಖ್ಯ ವೇದಿಕೆಯನ್ನು ಎತ್ತಿನಗಾಡಿಯ ರೂಪದಲ್ಲಿ ನಿರ್ವಿುಸಲಾಗುತ್ತಿದೆ. ಬೃಹತ್ ನೇಗಿಲ ಪ್ರತಿಕೃತಿ ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶಂಕರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net