

ಹಿರಿಯೂರು: ತಾಲೂಕಿನ ಜೆ.ಜಿ. ಹಳ್ಳಿ ಹೋಬಳಿ ವ್ಯಾಪ್ತಿಯ 18 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಸಚಿವ ಟಿ. ರಘುಮೂರ್ತಿ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗಡುವು ನೀಡಿದರು.
ತಾಲೂಕಿನ ಕಾತ್ರಿಕೇನಹಳ್ಳಿ, ಚಿಗಳಕಟ್ಟೆ, ಜೆ.ಜಿ. ಹಳ್ಳಿ, ಕರಿಯಾಲ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ, ಏತ ನೀರಾವರಿ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಏತ ನೀರಾವರಿ ಯೋಜನೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಭೂಮಿ ಪೂಜೆ ನೆರವೇರಿಸಿದ್ದು, ಕಲ್ವಳ್ಳಿ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ದಿ. ಸುಧಾಕರ್ ಅವರ ಕನಸಾಗಿತ್ತು. ಅದಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ತ್ವರಿತ ಕಾಮಗಾರಿ ಆರಂಭಿಸಿ ಕೆರೆಗಳಿಗೆ ನೀರು ತುಂಬಿಸಿದರೆ ಕುಡಿವ ನೀರು, ಅಂತರ್ಜಲ ವೃದ್ಧಿ, ಕೃಷಿ ಚಟುವಟಿಕೆಗೆ ವರದಾನವಾಗಲಿದೆ, ಏತ ನೀರಾವರಿ ಯೋಜನೆಯಿಂದ ಜೆ.ಜಿ. ಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 5 ಸಾವಿರ ಎಕರೆ ನೀರಾವರಿಗೆ ಒಳಪಡಲಿದ್ದು, ಅಂತರ್ಜಲ ವೃದ್ಧಿಯಾಗಿ ಭವಿಷ್ಯದಲ್ಲಿ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಮಾಜಿ ಶಾಸಕಿ ಕೆ. ಪೂರ್ಣಿಮಾ, ಜಿಪಂ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಕಾಂತರಾಜು, ರೈತ ಮುಖಂಡರಾದ ಮಣಿಕಂಠ, ಗರೀಬ್ ಅಲಿ, ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ನಿರಂಜನ್ಮೂರ್ತಿ, ಮಂಜುನಾಥ್, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಖಾದಿ ರಮೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಕ್ಮಂಜು ಇತರರಿದ್ದರು.
ಏತ ನೀರಾವರಿ ಯೋಜನೆಯಿಂದ ಕೈ ಬಿಟ್ಟಿರುವ ಕಿಚ್ಚಲ ಕೆರೆ ಸೇರ್ಪಡೆಗೆ ಸರ್ಕಾರ ಕ್ರಮವಹಿಸಿದೆ. ಹಿರಿಯೂರು-ಚಿಕ್ಕನಾಯಕನಹಳ್ಳಿ ಗಡಿ ಭಾಗದಲ್ಲಿರುವ ಕಿಚ್ಚಲ ಕೆರೆಗೆ ನೀರು ಹರಿಸಿದರೆ ಎರಡು ತಾಲೂಕಿನ ರೈತರಿಗೆ ಅನುಕೂಲವಾಗಲಿದೆ, ಕೆರೆಯ ಅಭಿವೃದ್ಧಿಗೆ 20 ಕೋಟಿ ರೂ. ಅಗತ್ಯವಿದ್ದು, ಸರ್ಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಗಾಯತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ತಾಲೂಕಿನ ಮಹತ್ವದ ಯೋಜನೆ ಆಗಿದೆ. ಯೋಜನೆ ತ್ವರಿತ ಪೂರ್ಣಗೊಂಡು ಬರಪೀಡಿತ ಜೆ.ಜಿ. ಹಳ್ಳಿ ಹೋಬಳಿಗೆ ನೀರು ಬರಲಿ ಎಂದು ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಚಿಗಳಕಟ್ಟೆ ಗ್ರಾಮದಲ್ಲಿ ಸಮುದಾಯ ಭವನಕ್ಕೆ ಸರ್ಕಾರ 2 ಕೋಟಿ ರೂ. ಮಂಜೂರು ಮಾಡಿದ್ದು, ಕಾಮಗಾರಿ ಸ್ಥಳಕ್ಕೆ ಸಚಿವರು ಭೇಟಿ ನೀಡಿದರು.