ಆಸ್ಪತ್ರೆಗಿಲ್ಲ ಉದ್ಘಾಟನೆ ಭಾಗ್ಯ!

ನೆಲ್ಲಿಕಟ್ಟೆ ಜನರಿಗೆ 2 ವರ್ಷವಾದರೂ ದೊರೆಯದ ಸೇವೆ
Hospital
ನೆಲ್ಲಿಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡ.Hospital
Published on: 

ಎಂ. ವೇದಮೂರ್ತಿ, ಭೀಮಸಮುದ್ರ

ಅಡಿಕೆ ಉದ್ಯಮಕ್ಕೆ ಹೆಸರಾದ ಭೀಮಸಮುದ್ರ ಗ್ರಾಪಂ ವ್ಯಾಪ್ತಿಯ ನೆಲ್ಲಿಕಟ್ಟೆ ಗ್ರಾಮದಲ್ಲಿ ಕಳೆದ ಎರಡು ವರ್ಷದ ಹಿಂದೆ ಬರೋಬ್ಬರಿ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ಆದರೆ, ಉದ್ಘಾಟನೆ ಸೌಭಾಗ್ಯ ಮಾತ್ರ ಇಂದಿಗೂ ಒದಗಿಬಂದಿಲ್ಲ. ಹಾಗಾಗಿ, ಆಸ್ಪತ್ರೆ ಇದ್ದರೂ ಚಿಕಿತ್ಸೆ ಸೇವಾ ಭಾಗ್ಯ ಮಾತ್ರ ಜನರಿಗೆ ದೊರೆತಿಲ್ಲ.

ಸುಮಾರು 140 ಮನೆಗಳಿರುವ 600 ಜನರಿರುವ ಈ ಗ್ರಾಮದಲ್ಲಿ ಮೂಲಸೌಲಭ್ಯಗಳು ಅಷ್ಟಕ್ಕಷ್ಟೇ. ಯಾವುದೇ ಕೆಲಸ ಕಾರ್ಯಕ್ಕೆ ದೂರದೂರುಗಳಿಗೆ ತೆರಳುವ ಸ್ಥಿತಿ ಇದೆ. ಕುಡಿಯುವ ನೀರು, ಮಕ್ಕಳ ಶಿಣ, ಸಾರಿಗೆ, ವಿದ್ಯುತ್​ ಈ ಬಗೆಯ ಎಲ್ಲ ಮೂಲ ಸೌಕರ್ಯಗಳಿಂದ ಗ್ರಾಮವು ವಂಚಿತವಾಗಿದೆ. ಆದರೆ, ಆರೋಗ್ಯ ಸೇವೆಗಾಗಿ ಸ್ಥಳಿಯರ ನಿರಂತರ ಹೋರಾಟ, ಮನವಿ ಸಲ್ಲಿಕೆ, ಪ್ರತಿಭಟನೆಗಳ ಹೋರಾಟದ ಫಲವಾಗಿ ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿತ್ತು. ಕಟ್ಟಡ ಕಾಮಗಾರಿಯೂ ನಡೆದು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿ ಎರಡು ವರ್ಷ ಕಳೆದಿವೆ. ಆದರೂ, ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಆಸ್ಪತ್ರೆ ಕಾರ್ಯಾರಂಭ ಮಾಡುವ ಗೋಜಿಗೆ ಹೋಗಿಲ್ಲ.

ಕುಡಿವ ನೀರಿನದ್ದೂ ಸಮಸ್ಯೆ!

ನೆಲ್ಲಿಕಟ್ಟೆ ಗ್ರಾಮದಲ್ಲಿ ನೀರಿನ ಅಭಾವ ತಡೆಗೆ ಓವರ್​ ಹೆಡ್​ ಟ್ಯಾಂಕ್​ ನಿರ್ಮಾಣ ಕಾಮಗಾರಿ ಆರಂಭಗೊಂಡು ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡು ಜನರ ಸೇವೆಗೆ ಲಭ್ಯವಾಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಯಾವಾಗ ನೋಡಿದರೂ ಟ್ಯಾಂಕ್​ ನಿರ್ಮಾಣದ ಕಾಮಗಾರಿ ನಡೆಯುತ್ತಲೇ ಇರುತ್ತದೆ. ಆದರೆ, ಪೂರ್ಣವಾಗುತ್ತಿಲ್ಲ. ಗ್ರಾಮಸ್ಥರು ಮಾತ್ರ ನೀರು ದೊರೆಯುವ ಆಸೆಯ ಕಂಗಳಲ್ಲಿ ದಿನದೂಡುವಂತಾಗಿದೆ.

ಅಕ್ರಮ ತಾಣ

ಸಮುದ್ರದಲ್ಲಿದ್ದರೂ ಉಪ್ಪಿಗೆ ಬಡತನವೆಂಬಂತೆ ಆಸ್ಪತ್ರೆಯಿದ್ದರೂ ಅಕ್ಕಪಕ್ಕದ ದೂರದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ದುಸ್ತಿತಿ ಗ್ರಾಮಸ್ಥರದ್ದಾಗಿದೆ. ನೂತನ ಆಸ್ಪತ್ರೆ ಬರುಬರುತ್ತಾ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕಟ್ಟಡದ ಸುತ್ತಮುತ್ತಲೆಲ್ಲ ಗಿಡಗಂಟೆ, ಹುಲ್ಲು, ಮುಳ್ಳಿನ ಗಿಡ ಬೆಳೆದು ಹಾಳುಕೊಂಪೆಯಂತೆ ಗೋಚರಿಸುತ್ತಿದೆ.

ಗುತ್ತಿಗೆದಾರರು ಕಟ್ಟಡ ಪೂರ್ಣಗೊಳಿಸಿ ಜಿಲ್ಲಾಸ್ಪತ್ರೆಗೆ ಜವಾಬ್ದಾರಿ ವಹಿಸಿಲ್ಲ. ಅಲ್ಲದೆ, ಉಪ ಕೇಂದ್ರದ ಸೌಲಭ್ಯಗಳೂ ಪೂರ್ಣಗೊಂಡಿಲ್ಲ. ಎಲೆಕ್ಟ್ರಿಕಲ್​ ಹಾಗೂ ನೀರಿನ ಸೌಲಭ್ಯ ಸೇರಿದಂತೆ ಅನೇಕ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿವೆ. ಹಾಗಾಗಿ, ನಾವು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಆಗುತ್ತಿಲ್ಲ.
ಗಿರೀಶ್​ ಟಿಎಚ್​ಒ
ಜಿಲ್ಲಾಡಳಿತ ರ್ನಿಲಕ್ಷದಿಂದ ಗ್ರಾಮದ ವೃದ್ಧರು, ಗರ್ಭಿಣಿಯರಿಗೆ ತೀವ್ರ ತೊಂದರೆಯಾಗುತ್ತಿದೆ. ಯಾವುದೇ ಅನಾರೋಗ್ಯ ಬಂದರೂ ಆರು ಕಿ.ಮೀ. ದೂರದ ಆಸ್ಪತ್ರೆಗೆ ಹೋಗಬೇಕು. ಶ್ರೀ ಆಸ್ಪತ್ರೆ ಉದ್ಘಾಟಿಸುವಂತೆ ಜಿಲ್ಲಾಧಿಕಾರಿಗೆ ಕಚೇರಿಗೆ ಮನವಿ ಪತ್ರ ಸಲ್ಲಿಸಿ 2 ವರ್ಷವಾದರೂ ಆಸ್ಪತ್ರೆ ಸಾರ್ವಜನಿಕರಿಗೆ ಸೇವೆ ನೀಡಲು ಸಿದ್ಧವಾಗುತ್ತಿಲ್ಲ.
ಆರ್​. ರಮೇಶ್​ ಗ್ರಾಪಂ ಮಾಜಿ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net