ಭದ್ರಾ ಯೋಜನೆಗೆ ಸರ್ಕಾರ ಪ್ರಾಧಾನ್ಯತೆ ಕೊಡಲಿ bhadra

ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರ ಸಭೆಯಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿದರು. ಎನ್.ವೈ. ಚೇತನ, ಎನ್.ವೈ. ಪೆನ್ನೋಬಳಸ್ವಾಮಿ, ಕುಮಾರಗೌಡ, ಜಯಕುಮಾರ, ಎಸ್. ಖಾದರ್, ಪರಮೇಶ್ವರಪ್ಪ, ಜಿ.ಪಿ. ಸುರೇಶ, ಭರತ್‌ಕುಮಾರ, ಶ್ರೀಕಾಂತ್, ಜಯಕುಮಾರ ಇದ್ದರು. bhadra
ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರ ಸಭೆಯಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿದರು. ಎನ್.ವೈ. ಚೇತನ, ಎನ್.ವೈ. ಪೆನ್ನೋಬಳಸ್ವಾಮಿ, ಕುಮಾರಗೌಡ, ಜಯಕುಮಾರ, ಎಸ್. ಖಾದರ್, ಪರಮೇಶ್ವರಪ್ಪ, ಜಿ.ಪಿ. ಸುರೇಶ, ಭರತ್‌ಕುಮಾರ, ಶ್ರೀಕಾಂತ್, ಜಯಕುಮಾರ ಇದ್ದರು. bhadra
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಶಾಸಕ ಎನ್.ವೈ.ಜಿ ಒತ್ತಾಯ
  • ರಾಂಪುರದಲ್ಲಿ ಸಮಾನ ಮನಸ್ಕರ ಸಭೆ

ಮೊಳಕಾಲ್ಮೂರು: ಮಂತ್ರಿಗಿರಿ ಕೊಡದೇ ಇದ್ದರೂ ಪರವಾಗಿಲ್ಲ. ಪಕ್ಷಕ್ಕೆ ಮುಜುಗರ ತರುವ ಕೆಲಸ ಎಂದೂ ಮಾಡುವುದಿಲ್ಲ. ಕ್ಷೇತ್ರದ ಜನರ ಬದುಕು ಹಸನಾಗಲು ಅಪ್ಪರ್ ಭದ್ರಾ ಯೋಜನೆ ಸಕಾರಕ್ಕೆ ಸರ್ಕಾರ ಪ್ರಧಾನ್ಯತೆ ಕೊಡಲಿ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಒತ್ತಾಯಿಸಿದರು.

bhadra

ತಾಲೂಕಿನ ರಾಂಪುರದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಪಕ್ಷದ ಮಾರ್ಗದರ್ಶನದಲ್ಲಿ ಶಾಸಕನಾಗಿ ಕೆಲಸ ಮಾಡುತ್ತೇನೆ. ಪಕ್ಷಕ್ಕೆ ಕಳಂಕ ತರುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
ಮೊಳಕಾಲ್ಮೂರು ಎಸ್ಟಿ ಮೀಸಲು ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಸಾಬೀತು ಮಾಡಿದ್ದೇನೆ. ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲೂ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇನೆ. 7 ಬಾರಿ ಗೆದ್ದಿರುವ ಸಿನಿಯಾರಿಟಿ ಆಧಾರದಲ್ಲಿ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಭರವಸೆ ಇತ್ತು. ವರಿಷ್ಠರು ಕೊನೇ ಘಳಿಗೆಯಲ್ಲಿ ತಪ್ಪಿಸಿದ್ದು ನೋವಾಯಿತು. ಸಾಮಾಜಿಕ ನ್ಯಾಯದಡಿ ಒಲಿದು ಬಂದ ಅದೃಷ್ಟ ಕೈತಪ್ಪಿತಲ್ಲ ಎಂದು ಕ್ಷೇತ್ರದ ಕಾರ್ಯಕರ್ತರಿಗೂ ಬೇಸರ ತರಿಸಿದೆ. ಕಾಣದ ಕೈಗಳು ನನಗೆ ಸಚಿವ ಸ್ಥಾನ ತಪ್ಪಿಸುವ ಷಡ್ಯಂತ್ರವೂ ನಡೆದಿದೆ. ಅದಕ್ಕೆ ಎಂದೂ ಜಗ್ಗಲ್ಲ. ಅಧಿಕಾರದ ಲಾಲಸೆ ನನಗಿಲ್ಲ. ಮತ ಕೊಟ್ಟು ಗೆಲ್ಲಿಸಿದ ಜನರ ಮುಂದೆ ತಲೆಬಾಗುತ್ತೇನೆ ಹೊರತು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲು ತಟ್ಟಲ್ಲ. ಯಾರಲ್ಲೂ ಕೈಮುಗಿದು ಬೇಡುವ ಜಾಯಮಾನ ನನ್ನದಲ್ಲ ಎಂದು ಹೇಳಿದರು.
ಬರದ ತಾಪಕ್ಕೆ ತುತ್ತಾಗಿರುವ ತವರು ಕ್ಷೇತ್ರದ ಸಮಗ್ರ ನೀರಾವರಿಗೆ ಅಪ್ಪರ್ ಭದ್ರಾ ಯೋಜನೆ ಕೈಗೂಡಲು ಪೂರಕವಾಗಿ ಕೆಲಸ ಮಾಡುತ್ತೇನೆ. ಸರ್ಕಾರಕ್ಕೆ ನನ್ನ ಕ್ಷೇತ್ರದ ಮೇಲೆ ಪ್ರೀತಿ ಇದ್ದರೆ ನನ್ನ ಬೇಡಿಕೆ ಈಡೇರಿಸಲಿ. ಇದಕ್ಕೆ ಪೂರಕವಾಗಿ ಕೆಎಂಆರ್‌ಸಿ ಯೋಜನೆಯಡಿ ಸಾಕಷ್ಟು ಹಣ ಇದೆ. ಅದರಲ್ಲಿ ಅಲ್ಪ ಹಣ ಬಳಸಿದರೂ ನಮ್ಮ ಕನಸು ನನಸಾಗಲಿದೆ. ಈ ಅಂಶವನ್ನು ಸಿಎಂ ಗಮನಕ್ಕೂ ತರಲಾಗಿದೆ. ನನಗೆ ಅಧಿಕಾರಕ್ಕಿಂತ ಪಕ್ಷ ಮುಖ್ಯ. ಮಂತ್ರಿ ಪಟ್ಟ ವಿಚಾರದಲ್ಲಿ ಕಾರ್ಯಕರ್ತರು ವಿಚಲಿತರಾಗದೆ ಪಕ್ಷದ ಬಲವರ್ಧನೆಗೆ ಒತ್ತುಕೊಡಬೇಕು ಎಂದರು.
ಮುಖಂಡ ಎಚ್.ಟಿ. ನಾಗರಡ್ಡಿ ಮಾತನಾಡಿ, ಎನ್‌ವೈಜಿಗೆ ಮಂತ್ರಿ ಸ್ಥಾನ ಕೈತಪ್ಪಿತು ಎಂದು ಪಕ್ಷ ಅಥವಾ ವರಿಷ್ಠರನ್ನು ದೂಷಿಸುವ ನಡೆ ಬೇಡ. ಕಾಂಗ್ರೆಸ್‌ಗೆ ಅವರ ಕೊಡುಗೆಯೇನು ಎಂಬ ಅರಿವಿದೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಮುಂಬರುವ 2028ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅವರ ಶಕ್ತಿ ಏನೆಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಲು ಈಗಿನಿಂದಲೇ ಪಕ್ಷ ಸಂಘಟನೆಗೆ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ತಾಲೂಕು ಅಧ್ಯಕ್ಷ ಎನ್.ವೈ. ಚೇತನ, ಎನ್.ವೈ. ಪೆನ್ನೋಬಳಸ್ವಾಮಿ, ಬಾಲರಾಜ್, ವೀರನಗೌಡ, ಪಟೇಲ್‌ಜಿ. ಪಾಪನಾಯಕ, ಗುರುರಾಜಣ್ಣ, ಜಯರಾಮ್, ಕುಮಾರಗೌಡ, ಜಯಕುಮಾರ, ಎಸ್. ಖಾದರ್, ಪರಮೇಶ್ವರಪ್ಪ, ಬಡೋಬನಾಯಕ, ಡಾ. ಪ್ರೇಮಸುಧಾ, ಎಸ್.ಇ. ದೇವಯ್ಯ, ಜಿ. ಪ್ರಕಾಶ, ಜಯಲಕ್ಷ್ಮೀ, ನಾಗೇಶ್‌ರಡ್ಡಿ, ಪ್ರಭುಸ್ವಾಮಿ, ಮಂಜುಮ್ಮ, ಭರತ್‌ಕುಮಾರ, ಶ್ರೀಕಾಂತ್, ನಾಗ ಭೂಷಣ, ಸತ್ಯನಾರಾಯಣ, ಮಲ್ಲೇಶಿ, ಓಬಣ್ಣ, ಜಿಯಾವುಲ್ಲಾ, ನಾಗರಾಜ ಇತರರು ಇದ್ದರು.

ಕಳೆದ 30 ವರ್ಷಗಳ ಕಾಲ ರಾಜಕಾರಣದಲ್ಲಿ ರಾಜ್ಯ ಸುತ್ತಿದ್ದೇನೆ. ಹೋದ ಕಡೆಯಲ್ಲಿ ಮೊಳಕಾಲ್ಮೂರು ಗೋಪಾಲಕೃಷ್ಣ ಅಲ್ಲವೆ ಎಂದು ಜನ ಗುರುತು ಹಿಡಿದು ಕುಶಲೋಪಚಾರಿ ವಿಚಾರಿಸುತ್ತಾರೆ. ಕ್ಷೇತ್ರ ಜನರು 5 ಬಾರಿ ಅಧಿಕಾರ ಕೊಟ್ಟಿದ್ದಾರೆ. ಇದಕ್ಕಿಂತ ಮಂತ್ರಿಗಿರಿ ಬೇಕಾ. ಜೀವನದುದ್ದಕ್ಕೂ ಜನಜ ಜತೆ ಪ್ರೀತಿ, ವಿಶ್ವಾಸದಿಂದ ಇರುತ್ತೇನೆ. ಅದಕ್ಕಿಂತ ದೊಡ್ಡ ಹುದ್ದೆ ನನಗೆ ಬೇಕಿಲ್ಲ.

— ಎನ್.ವೈ. ಗೋಪಾಲಕೃಷ್ಣ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net