

ಚಿಕ್ಕಜಾಜೂರು: ಸಮೀಪದ ಗುಂಜಿಗನೂರು ಗೊಲ್ಲರಹಟ್ಟಿಯಲ್ಲಿ ಆಯೋಜಿಸಿದ್ದ ನರಸಿಂಹಸ್ವಾಮಿ ಪಟ್ಟಾಭಿಷೇಕ ಮಹೋತ್ಸವ ಹಾಗೂ ಹತ್ತು ದಿನಗಳ ಕಟ್ಲೆ ಪೂಜೆ ಸೋಮವಾರ ಸಮಾಪನೆಗೊಂಡಿತು.
ಗ್ರಾಮ ದೇವರು ನರಸಿಂಹಸ್ವಾಮಿ ಪಟ್ಟದ ಪೂಜಾರಿ ದಾಸಪ್ಪ ಅವರಿಗೆ ವಯಸ್ಸಾದ ಕಾರಣ ಮುಂದಿನ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗಲು ಅವರ ಮಕ್ಕಳಿಗೆ ಮುದ್ರೆ ಹಾಗೂ ಪೂಜಾರಿಕೆ ಪಟ್ಟಾಭಿಷೇಕ ನಡೆಸಲು ಗ್ರಾಮದ ಮುಖಂಡರು ತೀರ್ವಾನಿಸಿ, ಅ.16 ರಂದು ಗ್ರಾಮದಲ್ಲಿ ಸಾರು ಹಾಕಿಸಿದರು.
ಅಂದಿನಿಂದ ಅ.24 ರವರೆಗೆ ಗ್ರಾಮಸ್ಥರು ತಮ್ಮ ಮನೆಗಳ ಜಾನುವಾರುಗಳಿಂದ ಕರೆಯುವ ಹಾಲು, ಮೊಸರು, ಬೆಣ್ಣೆ ಇತ್ಯಾದಿಗಳನ್ನು ಬೇರೆಯವರಿಗೆ ವಾರಾಟ ವಾಡದಂತೆ ಹಾಗೂ ಊರಿನಿಂದ ಹೊರಗೆ ತೆಗೆದುಕೊಂಡು ಹೋಗದಂತೆ ನಿಬರ್ಂಧ ಹಾಕಲಾಗಿತ್ತು.
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಕರೆದ ಹಾಲನ್ನು ದೇವಸ್ಥಾನಕ್ಕೆ ಒಪ್ಪಿಸಬೇಕು. ಅಲ್ಲಿ ಹಾಲನ್ನು ಮೊಸರು ವಾಡಿ ಕೊನೆಯ ದಿನ ಕಡೆದು, ಬೆಣ್ಣೆ ತೆಗೆದು, ಅದರಿಂದ ತುಪ್ಪ ತಯಾರಿಸಿ ದೇವಸ್ಥಾನದ ದೀಪಕ್ಕೆ ಬಳಸಲು ತೆಗೆದಿಟ್ಟು ಉಳಿದ ತುಪ್ಪವನ್ನು ಪ್ರಸಾದವಾಗಿ ವಿತರಿಸಲಾಯಿತು.
ಪಟ್ಟಾಭಿಷೇಕ ಹಾಗೂ ಪಟ್ಟದ ಪೂಜಾರಿಗಳಿಗೆ ಮುದ್ರೆ ಹಾಕುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೂಜೆಗೆ ಆಗಮಿಸುವ ಭಕ್ತರು ಹಾಗೂ ನೆಂಟರಿಸ್ಟರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಚಿಕ್ಕಜಾಜೂರು, ಎಸ್.ಎಚ್. ಗೊಲ್ಲರಹಟ್ಟಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು, ಸಂಬಂಧಿಕರು ಪ್ರಸಾದ ಸ್ವೀಕರಿಸಿದರು. ಇದರೊಂದಿಗೆ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಆಚರಿಸಲಾಗುತ್ತಿದ್ದ ಧಾರ್ಮಿಕ ಪೂಜೆಗೆ ತೆರೆ ಎಳೆಯಲಾಯಿತು.
ಶನಿವಾರ ಮಧ್ಯಾಹ್ನ ಗ್ರಾಮ ದೇವರು ನರಸಿಂಹಸ್ವಾಮಿ ಜೊತೆ ಚನ್ನಗಿರಿ ತಾಲೂಕಿನ ದೊಡ್ಡಬ್ಬಿಗೆರೆ ತಿಮ್ಮಪ್ಪಸ್ವಾಮಿ ಹಾಗೂ ಗಂಗೂರಿನ ತಿಮ್ಮಪ್ಪ ಸ್ವಾಮಿ ಮತ್ತು ಸಮೀಪದ ಶಂಗೇರಿ ಹನುಮನಹಳ್ಳಿಯ ವಾರಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಸಮೀಪದ ಚಿಕ್ಕನಕಟ್ಟೆ ಹೊಳೆಗೆ ಕರೆದೊಯ್ದು, ಗಂಗಾಪೂಜೆ ನಡೆಸಲಾಯಿತು. ಬಳಿಕ ಉತ್ಸವ ಮೂರ್ತಿಗಳನ್ನು ಗ್ರಾಮಕ್ಕೆ ಕರೆ ತಂದು ಪೂಜೆಗೆ ಕೂರಿಸಲಾಯಿತು.
ಭಾನುವಾರ ಗ್ರಾಮದ ಪ್ರತಿ ಮನೆಯ ಸಹೋದರರು ದೇವಸ್ಥಾನಕ್ಕೆ 2000 ರೂ. ನಗದು, 3 ಸೇರು ಅಕ್ಕಿ ತಂದು ದೇವರಿಗೆ ಮೀಸಲು ಸಲ್ಲಿಸಿದರು. ಸೋಮವಾರ ಮುಂಜಾನೆ ದೇಗುಲದ ಆವರಣದಲ್ಲಿ ಹೋಮ ಹವನಗಳನ್ನು ನಡೆಸಲಾಯಿತು. ನಂತರ ದೇವರುಗಳನ್ನು ಗ್ರಾಮದ ಹೊರಗೆ ಕರೆದೊಯ್ದು ಮೂಡಲ ಮಣೇವು ಪೂಜೆ ನಡೆಸಲಾಯಿತು.
ಗೊಲ್ಲ ಸಮುದಾಯದ ಸಂಪ್ರದಾಯದಂತೆ ಗ್ರಾಮದ ನರಸಿಂಹಸ್ವಾಮಿ ಪಟ್ಟದ ಪೂಜಾರಿ ದಾಸಪ್ಪನ ಮಕ್ಕಳಾದ ರಮೇಶ್ ಹಾಗೂ ಸುರೇಶ್ ಅವರಿಗೆ ಪೂಜಾರಿಕೆ ಪಟ್ಟ ಕಟ್ಟುವುದರ ಜತೆಗೆ ಇಬ್ಬರಿಗೂ ಮುದ್ರೆ ಹಾಕಲಾಯಿತು. ಪೂಜೆಯಲ್ಲಿ ಹಿರಿಯೂರು, ಚಳ್ಳಕೆರೆ ತಾಲೂಕಿನಿಂದ ಸಾವಿರಾರು ಜನರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.