ಭರಮಸಾಗರದಲ್ಲಿ ಖೋ...ಖೋ... ಕ್ರೀಡೆ ಕೂಗು! Sports

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಖೋ..ಖೋ ಅಭ್ಯಾಸ ಮಾಡುತ್ತಿರುವ ಮಕ್ಕಳು. Sports
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಖೋ..ಖೋ ಅಭ್ಯಾಸ ಮಾಡುತ್ತಿರುವ ಮಕ್ಕಳು. Sports
Published on

ಪ್ರಮುಖ ಮುಖ್ಯಾಂಶಗಳು

  • ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ
  • 20 ವರ್ಷಗಳಿಂದ ಮಕ್ಕಳಿಗೆ ಉಚಿತ ತರಬೇತಿ

ಸಿ.ಎಂ. ನಾಡಿಗೇರ್, ಭರಮಸಾಗರ

ಭರಮಸಾಗರ ಜನತೆ ಹಾಸಿಗೆಯಿಂದ ಏಳುವ ಮೊದಲೇ ಬೆಳಗಿನ ಜಾವ ಐದು ಗಂಟೆ ವೇಳೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಖೋ...ಖೋ... ಎಂಬ ಕೂಗು ಕೇಳಿಬರತೊಡಗುತ್ತದೆ. ಆಗಸ್ಟ್ ಮೊದಲ ವಾರ ನಡೆಯಲಿರುವ ಹೋಬಳಿ ಮಟ್ಟದ ಕ್ರೀಡಾಕೂಟ ಗುರಿಯಾಗಿಸಿಕೊಂಡು ಗ್ರಾಮೀಣ ಮಕ್ಕಳು ಪ್ರತಿದಿನ ಬೆವರು ಹರಿಸುತ್ತಿದ್ದಾರೆ.

Sports

ಮಕ್ಕಳು ಸಹ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕದಂಬ ಸ್ಪೋರ್ಟ್ಸ್ ಹಾಕಿದ ಭದ್ರ ಅಡಿಪಾಯ: ಪಟ್ಟಣದಲ್ಲಿ ಕದಂಬ ಸ್ಪೋರ್ಟ್ಸ್ ಕ್ಲಬ್ ಆರಂಭಿಸಿದ ಕ್ರೀಡಾ ಚಟುವಟಿಕೆಯನ್ನು ನಂತರ ಶಾಲೆಯ ಹಳೆಯ ವಿದ್ಯಾರ್ಥಿಗಳು ಮುಂದುವರಿಸಿದರು. ಈಗ ತರಬೇತುದಾರರಾದ ಸುರೇಶ್ ನಾಯಕ್, ತಿಪ್ಪೇಸ್ವಾಮಿ, ದಾದಾಪೀರ್, ಸಂದೀಪ್ ಹಾಗೂ ನಂದೀಶ್ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
ದೈಹಿಕ ಶಿಕ್ಷಕರ ಕೊರತೆ: ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಈ ಕಾರಣದಿಂದ ಮಕ್ಕಳಿಗೆ ನಿರಂತರ ತರಬೇತಿ ದೊರೆಯಬೇಕೆಂಬ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಉಚಿತವಾಗಿ ತರಬೇತಿ ನೀಡುತ್ತಿ ದ್ದೇವೆ. ಗ್ರಾಮೀಣ ಕ್ರೀಡೆಗಳು ಉಳಿಯಬೇಕು, ಮಕ್ಕಳು ಉತ್ತಮ ಸಾಧನೆ ಮಾಡಬೇಕು ಎಂಬುದೇ ನಮ್ಮ ಉದ್ದೇಶ ಎಂದು ಮುಖ್ಯ ತರಬೇತುದಾರ ಸುರೇಶ್ ನಾಯಕ್ ಹೇಳುತ್ತಾರೆ.
ರಾಜ್ಯಮಟ್ಟದ ಸಾಧನೆಗೆ ಸಾಕ್ಷಿ: ಕದಂಬ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ತರಬೇತಿ ಪಡೆದ ಹಲವರು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಗಾಯತ್ರಿ ಮತ್ತು ದಶವಂತ್ ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ.
ಪೌಷ್ಟಿಕ ಆಹಾರ ವ್ಯವಸ್ಥೆ: ತರಬೇತಿ ಪಡೆಯುವ ಮಕ್ಕಳಿಗೆ ಹಾಲು, ಮೊಟ್ಟೆ, ಹೆಸರುಕಾಳು, ಕಡಲೆ ಕಾಳು, ಶೇಂಗಾ ಮತ್ತಿತರ ಪೌಷ್ಟಿಕ ಆಹಾರ ನೀಡಲಾ ಗುತ್ತಿದೆ. ಈ ಕಾರ್ಯಕ್ಕೆ ಸ್ಥಳೀಯ ದಾನಿಗಳು ಹಾಗೂ ಕ್ರೀಡಾಭಿಮಾನಿಗಳು ಸಹಕಾರ ನೀಡುತ್ತಿದ್ದಾರೆ.
ಸಹಕಾರ ದೊರೆತರೆ ಇನ್ನಷ್ಟು ಸಾಧನೆ: ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಅವರಿಗೆ ಉತ್ತಮ ಕ್ರೀಡಾ ಸಾಮಗ್ರಿ, ಸ್ಪೋರ್ಟ್ಸ್ ಶೂ ಹಾಗೂ ಅಗತ್ಯ ಸೌಲಭ್ಯ ದೊರೆತರೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ದಾನಿಗಳು ನೆರವಿಗೆ ಬಂದರೆ ಹೆಚ್ಚಿನ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಬಹುದು. ಈಗಾಗಲೇ ಸುಮಾರು 100 ಮಕ್ಕಳು ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪಡೆಯಲು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡೆಗಳಿಗೆ ತರಬೇತಿ ವಿಸ್ತರಿಸುವ ಯೋಜನೆ ಇದೆ ಎಂದು ತರಬೇತುದಾರ ಸಂದೀಪ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net