ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಭಾನುವಾರ ಆಯೋಜಿಸಿದ್ದ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರ್‌ದಾಸ್‌ಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು. ಡಾ.ಎನ್. ಶ್ರೀಕಂಠಮೂರ್ತಿ, ಎಸ್.ಕೆ. ಬಸವರಾಜನ್, ರಾಧಾಕೃಷ್ಣ ಪಲ್ಲಕ್ಕಿ, ಎಂ.ಜಿ. ರಾಮದಾಸ್ ಇತರರು ಇದ್ದರು. Worship
ಚಿಕ್ಕಜಾಜೂರು: ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರ್‌ದಾಸ್ ಜೀ ಅವರ ಕನಸುಗಳನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕೋಣ ಎಂದು ಅನಾಥ ಸೇವಾಶ್ರಮದ ಅಧ್ಯಕ್ಷ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
Worship
ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಜಿ ಅವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಸ್ವಾಮೀಜಿದ್ವಯರು ಬರಿಗೈಯಲ್ಲಿ ಈ ಗ್ರಾಮಕ್ಕೆ ಬಂದು, ನಾಡಿಗೆ ಇಂತಹದೊಂದು ಬೃಹತ್ ಆಶ್ರಮವನ್ನು ಕಟ್ಟಿ, ಸಮಾಜದಲ್ಲಿ ಲಕ್ಷಾಂತರ ಜನರ ಬದುಕಿನಲ್ಲಿ ಸಮಾನತೆ, ದೀನ ದಲಿತರ ಉದ್ಧಾರಕ್ಕೆ ಶ್ರಮಿಸಿದರು. ಅವರು ತೋರಿಸಿರುವ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ನಾವು ಅಧ್ಯಕ್ಷರಾಗಿ ಬಂದಾಗಿನಿಂದ ಇಲ್ಲಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕುವುದರ ಜತೆಗೆ ಆಶ್ರಮವನ್ನು ಬೆಳೆಸುವ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಜಿ ಅವರಿಗೆ ನುಡಿನಮನ ಸಲ್ಲಿಸಿದ ಬೆಂಗಳೂರಿನ ನಿವೃತ್ತ ಹಿರಿಯ ಅಧ್ಯಾಪಕ ಎಚ್.ಎಸ್. ಪ್ರಭಾಕರ್ ಮಾತನಾಡಿ, ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಒಟ್ಟಿಗೆ ತಾವು ಕಳೆದ ದಿನಗಳನ್ನು ಸ್ಮರಿಸಿಕೊಂಡ ಅವರು, ಶ್ರೀಗಳಿಬ್ಬರು ಸ್ವಾರ್ಥಕ್ಕಾಗಿ ಏನನ್ನೂ ಮಾಡಿಕೊಳ್ಳದೆ ಕೇವಲ ಸಮಾಜೋದ್ಧಾರಕ್ಕೆ ದುಡಿದರು ಎಂದರು.
ಅವರ ಶ್ರಮ ಮತ್ತು ಕಾಯಕದಿಂದಾಗಿ ಆಶ್ರಮದ ಮೂಲಕ ಬದುಕನ್ನು ಕಟ್ಟಿಕೊಂಡವರ ಸಂಖ್ಯೆ ಸಾಕಷ್ಟಿದೆ. ಅಂದು ಜೋಳಿಗೆಗೆ ಹಾಕುವ ಮನಸ್ಥಿತಿ ಇದ್ದರೂ ಹಣಕಾಸಿನ ಕೊರತೆ ಇತ್ತು. ಇಂದು ಸಮಾಜದಲ್ಲಿ ಸ್ಥಿತಿವಂತರು ಬೇಕಾದಷ್ಟಿದ್ದರೂ ದಾನಕೊಡುವ ಮನಸ್ಸುಗಳ ಸಂಖ್ಯೆ ಕಡಿಮೆ ಎಂದರು.
ಆಶ್ರಮದ ಉಪಾಧ್ಯಕ್ಷ ಡಾ.ಎನ್. ಶ್ರೀಕಂಠಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಡೆ-ನುಡಿಗಳಲ್ಲಿ ಸಾಮ್ಯತೆ ಇದ್ದಾಗ ಮಾತ್ರ ಮಾನವ ಮಾಧವನಾಗುತ್ತಾನೆ. ಆಶ್ರಮವನ್ನು ಮತ್ತಷ್ಟು ಬೆಳೆಸುವ ಯೋಜನೆ ಇದ್ದು, ಎಲ್ಲರ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಶ್ರಮದ ಕಾರ್ಯದರ್ಶಿ ಎಸ್.ಕೆ. ಬಸವರಾಜನ್ ಮಾತನಾಡಿ, ಸಮಾಜದಲ್ಲಿ ಸಮಾನತೆಯ ಮತ್ತು ಬದುಕುವ ಕಲೆಯ ದಾರಿ ತೋರುವ ಗುರುಗಳು ಅತ್ಯಂತ ವಿರಳ. ಮಲ್ಲಾಡಿಹಳ್ಳಿಯ ಗುರುಗಳು ಇಂತಹ ದಾರಿ ತೋರಿದ್ದರಿಂದಲೇ ಅವರನ್ನು ಇಂದಿಗೂ ನಾವೆಲ್ಲರೂ ಜ್ಞಾಪಿಸಿಕೊಳ್ಳುತ್ತಿದ್ದೇವೆ ಎಂದರು.
ಸ್ವಾಮೀಜಿಯವರ ಕುರಿತ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಧಾಕೃಷ್ಣ ಪಲ್ಲಕ್ಕಿ, ವಿಶ್ವಸ್ತರಾದ ಎಂ.ಜಿ. ರಾಮದಾಸ್, ಕೆಂಗುಂಟೆ ಬಿ. ಜಯಣ್ಣ, ದ್ಯಾಮಪ್ಪ, ಪಿ.ಕೆ. ರಾಜಪ್ಪ, ಆಶ್ರಮದ ವ್ಯವಸ್ಥಾಪಕ ಡಿ.ಕೆ. ಚಂದ್ರಪ್ಪ, ರಾಜಣ್ಣ, ರಮೇಶ್ ಬಿ.ದುರ್ಗ, ರಾಜಕುಮಾರ್, ಆಶ್ರಮದ ಅಧ್ಯಾಪಕ ವರ್ಗ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಜಿ.ಎಂ. ಗುರುಮೂರ್ತಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ಜಿ.ಟಿ. ಶಂಕರಮೂರ್ತಿ ನಿರೂಪಿಸಿದರು. ಎಚ್.ಎಂ. ಸೋಮಶೇಖರ್ ವಂದಿಸಿದರು.