UGD work: ಯುಜಿಡಿ ಕಾಮಗಾರಿಗೆ 100 ಕೋಟಿ ರೂ. ಅನುದಾನ

 UGD work:ಬೆಂಗಳೂರಿನ ವಿಕಾಸ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಹಿರಿಯೂರಿನ ಯುಜಿಡಿ ಕಾಮಗಾರಿ ಅನುಷ್ಠಾನ ಕುರಿತು ಚರ್ಚಿಸಲಾಯಿತು.
UGD work:ಬೆಂಗಳೂರಿನ ವಿಕಾಸ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಹಿರಿಯೂರಿನ ಯುಜಿಡಿ ಕಾಮಗಾರಿ ಅನುಷ್ಠಾನ ಕುರಿತು ಚರ್ಚಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಿ.ಸುಧಾಕರ್ ಮಾಹಿತಿ
  • 2 ಹಂತದಲ್ಲಿ ಯೋಜನೆ ಜಾರಿ
  • ಯುಜಿಡಿ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
ಹಿರಿಯೂರು: ನಗರ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಗೆ ugd work 100 ಕೋಟಿ ರೂ. ಅನುದಾನ ನೀಡಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯುಜಿಡಿ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲ ಹಂತದಲ್ಲಿ ನಗರದ ದಕ್ಷಿಣ ಭಾಗದ 25 ವಾರ್ಡ್ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಅನುಷ್ಠಾನವಾಗಲಿದೆ. 31ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿಗೆ 206 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರದ ಮಾರ್ಗಸೂಚಿ ಪ್ರಕಾರ 2 ಹಂತದಲ್ಲಿ ಯೋಜನೆ ಜಾರಿಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
25 ವಾರ್ಡ್ ವ್ಯಾಪ್ತಿಯಲ್ಲಿ 109 ಕಿಮೀ. ಉದ್ದದ ಕೊಳವೆ ಮಾರ್ಗ ಹಾದುಹೋಗಲಿದ್ದು, 3691ಯಂತ್ರಗುಂಡಿ, ರಾಷ್ಟ್ರೀಯ ಹೆದ್ದಾರಿ ಸೇವಾ ರಸ್ತೆ, ವೇದಾವತಿ ನದಿಯ ದಕ್ಷಿಣ ದಂಡೆ, ಸೇತುವೆ ಬಳಿ ವೆಟ್‌ವೆಲ್, ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುವುದು. 2 ವೆಟ್‌ವೆಲ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ಅಳವಡಿಕೆ, 8.61 ಎಂಎಲ್‌ಡಿ ಮಲಿನ ನೀರನ್ನು ವಿನೂತನ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ವೇದಾವತಿ ನದಿಗೆ ಹರಿಸಲಾಗುವುದು. ನೀರು ಮರು ಬಳಕೆಗೆ ಯೋಗ್ಯವಾಗಿರುವುದರಿಂದ ಹತ್ತಿರದ ಕೈಗಾರಿಕೆ, ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ ಎಂದರು.
2 ನೇ ಹಂತದ ಯುಜಿಡಿ ಯೋಜನೆ ಜಾರಿಗೆ ಡಿಪಿಆರ್ ಸಿದ್ದಪಡಿಸಿ ಅಂದಾಜು ಮೊತ್ತದ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು. ದಶಕದಿಂದ ನನೆಗುದಿಗೆ ಬಿದ್ದಿದ್ದ ಯುಜಿಡಿ ಕಾಮಗಾರಿಗೆ ಮರು ಜೀವಕೊಟ್ಟು ನಗರದ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಡಳಿತಾತ್ಮಕ ಅನುಮೋದನೆ ಹಿನ್ನೆಲೆಯಲ್ಲಿ ಶೀಘ್ರ ಟೆಂಡರ್ ಪ್ರಕ್ರಿಯೆ-ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಮುಖ್ಯ ಇಂಜಿನಿಯರ್ ಪ್ರವೀಣ್ ಲಿಂಗಯ್ಯ, ಕಾರ್ಯಪಾಲಕ ಇಂಜಿನಿಯರ್ ಮಲ್ಲೇಶ್ ನಾಯ್ಕ, ಸಹಾಯಕ ಇಂಜಿನಿಯರ್ ಓಬನಾಯ್ಕ, ನಗರ ಸಭೆ ಪೌರಾಯುಕ್ತ ಎ.ವಾಸೀಂ, ಸಚಿವರ ಆಪ್ತ ಸಹಾಯಕ ಕೆ.ಪ್ರಕಾಶ್, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಖಾದಿ ಜೆ.ರಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net