ಬಯಲು ಸೀಮೆ ರೈತರಿಗೆ ನೇರಳೆ ವರದಾನ

ಹಿರಿಯೂರಿನ ಅಂಬೇಡ್ಕರ್ ವೃತ್ತದಲ್ಲಿ ನೇರಳೆ ಹಣ್ಣು ಮಾರಾಟ ಮಾಡುತ್ತಿರುವುದು.
ಹಿರಿಯೂರಿನ ಅಂಬೇಡ್ಕರ್ ವೃತ್ತದಲ್ಲಿ ನೇರಳೆ ಹಣ್ಣು ಮಾರಾಟ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಯಲು ಸೀಮೆ ರೈತರಿಗೆ ನೇರಳೆ ವರದಾನ
  • ಹಿರಿಯೂರಿನ 100 ಹೆಕ್ಟೇರ್‌ನಲ್ಲಿ ಬೇಸಾಯ
  • ಸೀಸನಲ್ ಹಣ್ಣಿಗೆ ಭಾರಿ ಬೇಡಿಕೆ
  • ಕೆಜಿಗೆ 200 ರೂ.ವರೆಗೂ ಮಾರಾಟ
ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಮಾವಿನ ಜತೆ ನೇರಳೆ ಹಣ್ಣು ಮಾರುಕಟ್ಟೆ ಪ್ರವೇಶಿಸಿದ್ದು, ಕೆಜಿ 150 ರಿಂದ 200ಕ್ಕೆ ಮಾರಾಟವಾಗುತ್ತಿದೆ.
ಇದು ಸೀಸನಲ್ ಹಣ್ಣಾಗಿರುವುದರಿಂದ ವರ್ಷದಲ್ಲಿ ಒಮ್ಮೆ ಮಾತ್ರ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಬಯಲು ಸೀಮೆ ರೈತರು ದಾಳಿಂಬೆ, ಪಪ್ಪಾಯ, ಶ್ರೀಗಂಧ ಇತರ ಬೆಳೆಗಳ ಜತೆ ಮಿಶ್ರ ಬೇಸಾಯವಾಗಿ ನೇರಳೆ ಬೆಳೆಯುತ್ತಿದ್ದಾರೆ.
ನೇರಳೆ ಕೃಷಿ ರೈತರಿಗೆ ಲಾಭದಾಯಕವಾಗಿದೆ. ರೈತರು ತಮ್ಮ ಜಮೀನಿನ ಬದು, ಖಾಲಿ ಜಾಗದಲ್ಲಿ ದೇಸಿ ನೇರಳೆ ಗಿಡ ನಾಟಿ ಮಾಡುತ್ತಿದ್ದರು. ಇದರ ಜತೆಗೆ ತೋಟಗಾರಿಕೆ ಬೆಳೆಗಳ ಜತೆಗೆ ಕಸಿ ಗಿಡ(ಜಂಬು ನೇರಳೆ)ನೆಟ್ಟರೆ ಹೆಚ್ಚು ಲಾಭ ಗಳಿಸಬಹುದಾಗಿದೆ. ನಾಟಿ ತಳಿಯಿಂದ ಫಸಲು ಪಡೆಯಲು 8-10 ವರ್ಷ ಕಾಯಬೇಕು. ಜಂಬು ನೇರಳೆಯಾದರೆ 3 ರಿಂದ 4 ವರ್ಷಕ್ಕೆ ಹಣ್ಣುಗಳು ಸಿಗುತ್ತವೆ.
ಮಾರ್ಚ್-ಏಪ್ರಿಲ್‌ನಲ್ಲಿ ಹೂ ಬಿಡಲಾರಂಭಿಸಿ, ಮೇ-ಜೂನ್ ತಿಂಗಳಲ್ಲಿ ಹಣ್ಣು ಸಿಗುತ್ತವೆ. ಒಂದು ಮರ 2-3 ಕ್ವಿಂಟಲ್ ಫಸಲು ಕೊಡುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಹಿರಿಯೂರಲ್ಲಿ ಪ್ರತಿ ನಿತ್ಯ 500 ಕೆಜಿ ಹಣ್ಣು ಮಾರಾಟವಾಗುತ್ತಿದೆ. ಪ್ರಸ್ತುತ ನೇರಳೆ ವಾಣಿಜ್ಯ ಬೆಳೆಯಾಗಿದೆ.

ಔಷಧೀಯ ಗುಣ

ಸಕ್ಕರೆ ಕಾಯಿಲೆಗೆ ನೇರಳೆ ಹಣ್ಣು ಸಂಜೀವಿನಿಯಾಗಿದೆ. ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣಿನ ರಸಕ್ಕೆ ಉತ್ತಮ ಬೆಲೆ ಇದೆ. ಇದರ ತಿರಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೂ ಬಳಸಲಾಗುತ್ತದೆ. ಇದರ ಬೀಜದಲ್ಲಿ ಪ್ರೋಟಿನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುವುದರಿಂದ ಆಯುರ್ವೇದ, ಯುನಾನಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಪೊಟ್ಯಾಶಿಯಂನಿಂದ ತುಂಬಿರುವ ನೇರಳೆ ಹಣ್ಣು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಇತರ ಕಾಯಿಲೆಗೆ ಸಹಕಾರಿಯಾಗಿದೆ.

ಜಂಬು ನೇರಳೆ

ದೇಸಿ ತಳಿ ಗಿಡದಿಂದ ಕಸಿ ಮಾಡಿದ ಜಂಬು ನೇರಳೆ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. ಚಿಕ್ಕ ನೇರಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ಜೀ ಸತ್ವಗಳು-ಖನಿಜಗಳು ಸಮೃದ್ಧವಾಗಿವೆ. ನೇರಳೆ ಹಣ್ಣಿನ ಪ್ರಮುಖ ಪ್ರಯೋಜನವೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಸುಧಾರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಇದು ಉಪಯುಕ್ತವಾಗಿದೆ.

ಸರ್ಕಾರದ ಸೌಲಭ್ಯ

ನೇರಳೆ ಕೃಷಿಗೆ ಬಯಲು ಸೀಮೆ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಸೌಲಭ್ಯಕ್ಕೆ ಸಹಾಯ ಧನ ಸಿಗಲಿದೆ. ಸಸಿ ನೆಡಲು ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶ ಇದೆ. ತಾಲೂಕಿನಲ್ಲಿ ಅಂದಾಜು 100 ಹೆಕ್ಟೇರ್ ಪ್ರದೇಶದಲ್ಲಿ ನೇರಳೆ ಕೃಷಿಯಿದೆ.
"

ನೇರಳೆ ಕೃಷಿ ಬರದ ನಾಡಿನ ಬಂಗಾರದ ಬೆಳೆಯಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಜಂಬು ನೇರಳೆ ಹಣ್ಣಿಗೆ ಬೇಡಿಕೆ ಇದೆ. ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಔಷಧೀಯ ಗುಣ ಇರುವುದರಿಂದ ಸರ್ವ ರೋಗಕ್ಕೂ ಸಂಜೀವಿನಿಯಾಗಿದೆ.

— ಡಾ. ಪ್ರಕಾಶ್ ಕೆರೂರೆ. ಕೃಷಿ ವಿಜ್ಞಾನಿ. ತೋಟಗಾರಿಕೆ ಮಹಾವಿದ್ಯಾಲಯ. ಬಬ್ಬೂರು.
"

ರೈತರು ತಮ್ಮ ಜಮೀನಿನಲ್ಲಿ ಮಿಶ್ರ ಬೆಳೆಯಾಗಿ ನೇರಳೆ ಕೃಷಿ ಮಾಡುವುದರಿಂದ ಬೇಸಾಯದ ಖರ್ಚು-ವೆಚ್ಚಗಳಿಗೆ ಅನುಕೂಲವಾಗಲಿದೆ. ಭೂಮಿ ಫಲವತ್ತತೆ ಕಾಪಾಡುವುದರ ಜತೆಗೆ, ಹಕ್ಕಿ-ಪಕ್ಷಿಗಳಿಗೆ ಆಹಾರವೂ ದೊರಕಲಿದೆ.

— ಜಿ. ಕಲ್ಪನಾ, ಪ್ರಗತಿ ಪರ ರೈತ ಮಹಿಳೆ.
"

ನೇರಳೆ ಸೀಸನಲ್ ಹಣ್ಣಾಗಿರುವುದರಿಂದ ಒಂದು ತಿಂಗಳು ಮಾತ್ರ ಗ್ರಾಹಕರಿಗೆ ಸಿಗುತ್ತದೆ. ಹಣ್ಣು ಮಾರಾಟಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದೆ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಇದೆ.

— ಶಾಂತಲಾ, ಹಣ್ಣಿನ ವ್ಯಾಪಾರಿ. ಆಲೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net