ಜನರಿಗೆ ಸಕಾಲಕ್ಕೆ ಸರ್ಕಾರಿ ಸೌಲಭ್ಯ ಕಲ್ಪಿಸಿ

ಅಧಿಕಾರಿಗಳಿಗೆ ಜಿಪಂ ಉಪ ಕಾರ್ಯದರ್ಶಿ ಬಾಬು ಸೂಚನೆ
General Meeting
ಹೊಳಲ್ಕೆರೆ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಬಾಬು, ಶಿವಪ್ರಕಾಶ್​, ಕೆ.ಬಿ. ಸುರೇಶ್​ ಇದ್ದರು.General Meeting
Published on: 

ಹೊಳಲ್ಕೆರೆ: ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಬಾಬು ಸೂಚಿಸಿದರು.

ತಾಪಂ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯತೆ ವಹಿಸಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಯಲ್ಲಿ ವೈದ್ಯರು, ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬೆಡ್​ಶೀಟ್​ ಸ್ವಚ್ಛಗೊಳಿಸದೆ ರ್ನಿಲ$್ಯವಹಿಸಲಾಗಿದೆ. ಗರ್ಭಿಣಿಯರು ಹೆರಿಗೆಗೆ ಅಕ್ಕಪಕ್ಕದ ತಾಲೂಕುಗಳು, ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ ಎಂಬ ದೂರುಗಳಿವೆ. ಆಸ್ಪತ್ರೆಯ ನರ್ಸ್​ಗಳು ರೋಗಿಗಳ ಜತೆ ಗೌರವದಿಂದ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ತಾಪಂ ವತಿಯಿಂದ ಹಾಸ್ಟೆಲ್​ಗಳಿಗೆ ಸೋಲಾರ್​ ವಿದ್ಯುತ್​ ಕಂಬ ಅಳವಡಿಸಲಾಗಿದೆ. ಆದರೆ, ಅವುಗಳಿಗೆ ದೀಪ ಅಳವಡಿಸದೆ ಬಿಲ್​ ಪಡೆಯಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ವರದಿ ನೀಡುವಂತೆ ತಾಪಂ ಇ.ಒ. ಶಿವಪ್ರಕಾಶ್​ ಅವರಿಗೆ ಸೂಚಿಸಿದರು.

15ನೇ ಹಣಕಾಸು ಯೋಜನೆಯಡಿ ನಾಲ್ಕೆದು ವರ್ಷಗಳ ಹಿಂದೆ ಖರೀದಿಸಿರುವ ಸಕ್ಕಿಂಗ್​ ಯಂತ್ರ, ಟ್ರ್ಯಾಕ್ಟರ್​ಗಳು ಹಾಗೇ ನಿಂತಿವೆ. ಇದುವರೆಗೂ ಒಂದೇ ಒಂದು ದಿನವೂ ಬಳಕೆಯಾಗಿಲ್ಲ. ವಾಹನಗಳ ನೋಂದಣಿಯೂ ಆಗಿಲ್ಲ. ಇಒ ಅವರ ಬೇಜವಾಬ್ದಾರಿಯಿಂದ ಕೋಟ್ಯಂತರ ರೂ. ಮೌಲ್ಯದ ವಾಹನಗಳು ತುಕ್ಕು ಹಿಡಿಯುತ್ತಿವೆ. ಕೂಡಲೇ ನೋಂದಣಿ ಮಾಡಿಸಿ ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಾಬು ಸೂಚಿಸಿದರು. ಸಭೆಯಲ್ಲಿ ತಾಪಂ ಇಒ ಶಿವಪ್ರಕಾಶ್​,ಯೋಜನಾಧಿಕಾರಿ ಕೆ.ಬಿ. ಸುರೇಶ್​, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಸತಿ ಶಾಲೆಗಳ ಸೌಲಭ್ಯ ಪರಿಶೀಲನೆ

ಮುರಾರ್ಜಿ ದೇಸಾಯಿ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್​ಗಳನ್ನು ವಿತರಿಸದೆ ವಂಚಿಸುತ್ತಿರುವ ಬಗ್ಗೆ ಕೂಡಲೇ ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ತಿಳಿಸಿದರು. ಹಾಸ್ಟೆಲ್​ಗಳಲ್ಲಿ ಮೆನು ಪ್ರಕಾರವೇ ಊಟ ನೀಡಬೇಕು. ಅಡುಗೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಪಾನ್​ ಮಸಾಲ ಜಗಿಯುತ್ತಾ ಅಡುಗೆ ಕಾರ್ಯದಲ್ಲಿ ತೊಡಗುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಅಡುಗೆ ಭಟ್ಟರು ಬೇರೆಯವರನ್ನು ನೇಮಿಸಿ ಕೆಲಸಕ್ಕೆ ಬರುತ್ತಿಲ್ಲ ಎನ್ನುವ ದೂರು ವಿದ್ಯಾರ್ಥಿಗಳ ಪಾಲಕರಿಂದ ಬಂದಿದೆ. ಕಡ್ಡಾಯವಾಗಿ ಅಡುಗೆ ತಯಾರಕರ ಸೇವೆ ಪಡೆಯಬೇಕು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು. ಸಕಾಲಕ್ಕೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಎಚ್ಚರಿಕೆ ನೀಡಿದರು.

ಅಕ್ರಮ ತಡೆಗೆ ಸೂಚನೆ

ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ವಿ.ಬಿ. ರಾಮ್​ಜಿ ಯೋಜನೆಯಡಿ ಯಂತ್ರೋಪಕರಣ ಬಳಸಿ ಬಿಲ್​ ಪಡೆಯಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ಇಒ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪಾರದರ್ಶಕವಾಗಿ ಕೆಲಸ ಮಾಡಿಸಬೇಕು. ಇಂಜಿನಿಯರ್​ಗಳು, ಪಿಡಿಒಗಳು ಹೋಟೆಲ್​ನಲ್ಲಿ ಕುಳಿತು ಬಿಲ್​ ಮಾಡುವ ಕ್ರಮ ತಕ್ಷಣ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಫಲಕಗಳು ಕಡ್ಡಾಯ

ಸಣ್ಣ ನೀರಾವರಿ ಇಲಾಖೆ ತಾಲೂಕಿನಲ್ಲಿ ಕೈಗೊಂಡಿರುವ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಲಕ ಹಾಕಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಮೊಟ್ಟೆ ಪೂರೈಸಿ

ತಾಜಾ ಮೊಟ್ಟೆಗಳನ್ನು ಖರೀದಿಸಿ ಅಂಗನವಾಡಿ ಮಕ್ಕಳಿಗೆ ನೀಡಬೇಕು. ದಾಸ್ತಾನಿಟ್ಟುಕೊಳ್ಳಬಾರದು. ಪೌಷ್ಟಿಕಾಂಶ ಯುಕ್ತ ಆಹಾರಧಾನ್ಯ ವಿತರಿಸುತ್ತಿಲ್ಲ, ಹುಳುಬಿದ್ದ ಅಕ್ಕಿ ವಿತರಿಸಲಾಗುತ್ತಿದೆ. ಮಕ್ಕಳ ಸಂಖ್ಯೆ ಬೋಗಸ್​ ಮಾಡಲಾಗುತ್ತಿದೆ. ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರಗಳಿಗೆ ಬರುತ್ತಿಲ್ಲ ಎನ್ನುವ ಆರೋಪಗಳಿವೆ. ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಬಾಡಿಗೆ ದುರುಪಯೋಗ

ತಾಪಂ ಮಳಿಗೆಗಳಿಂದ ಬರುವ ಬಾಡಿಗೆ ಹಣ ದುರುಪಯೋಗವಾಗುತ್ತಿದೆ ಎನ್ನುವ ದೂರುಗಳಿವೆ. ಬಾಡಿಗೆ ರೂಪದಲ್ಲಿ ಬರುವ ಹಣವನ್ನು ರಸ್ತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಬೇಕು. ಒಟ್ಟು ಎಷ್ಟು ಮಳಿಗೆಗಳಿವೆ ಎಂಬ ಮಾಹಿತಿ ಮುಂದಿನ ಸಭೆಗೆ ಒದಗಿಸಬೇಕು. ಮಳಿಗೆ ಬೇರೆಯವರಿಗೆ ದುಪ್ಪಟ್ಟು ಮೊತ್ತಕ್ಕೆ ಬಾಡಿಗೆ ಕೊಟ್ಟು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಆರೋಪಗಳಿವೆ. ಮಳಿಗೆ ಪಡೆದವರೇ ವ್ಯಾಪಾರ ಮಾಡಬೇಕು. ಎಲ್ಲ ಮಳಿಗೆ ಪರಿಶೀಲನೆ ನಡೆಸಬೇಕು ಎಂದು ಬಾಬು ಸೂಚಿಸಿದರು.