ನಾಯಕನಹಟ್ಟಿ ಪುಣ್ಯಕ್ಷೇತ್ರಕ್ಕೆ ಸ್ವಾಗತಿಸುವ ಗುಂಡಿಗಳು!

ವಾಹನ ಸವಾರರ ನಿತ್ಯ ಪರದಾಟ
Road Problem
ನಾಯಕನಹಟ್ಟಿ ದೊಡ್ಡಹಳ್ಳ ಬಳಿ ರಾಜ್ಯಹೆದ್ದಾರಿ-65ರಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುತ್ತಿರುವುದು.Road Problem
Published on: 

ನಾಯಕನಹಟ್ಟಿ: ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ನಾಯಕನಹಟ್ಟಿಗೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳೇ ಭಕ್ತರನ್ನು ಸ್ವಾಗತಿಸುತ್ತಿವೆ. ಚಳ್ಳಕೆರೆ-ಅರಬಾವಿ ರಾಜ್ಯಹೆದ್ದಾರಿ-65 ಪಟ್ಟಣದ ಮೂಲಕ ಹಾದು ಹೋಗಿದ್ದು, ಮನುಮಯ್ಯನಹಟ್ಟಿ ಏಕಾಂತೇಶ್ವರ ಮಠದಿಂದ ಚಿಕ್ಕಕೆರೆವರೆಗೂ ಹದಗೆಟ್ಟಿದೆ. ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ದಿನ ದಿನಕ್ಕೂ ನಾಯಕನಹಟ್ಟಿ ಪಟ್ಟಣ ವಿಸ್ತರಣೆ ಯಾಗುತ್ತಿದ್ದು, ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ 50 ಹಾಗೂ 150ಎ ನಡುವೆ ರಾಜ್ಯ ಹೆದ್ದಾರಿ 65 ಸಂಪರ್ಕ ಕಲ್ಪಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಳ್ಳಕೆರೆ ಮೂಲಕ ಬೆಂಗಳೂರು ತಲುಪಲು 10 ರಿಂದ 12 ಕಿ.ಮೀ. ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ, ಉತ್ತರ ಕರ್ನಾಟಕದಿಂದ ಭಾರಿ ವಾಹನಗಳು ಇದೇ ರಸ್ತೆ ಅವಲಂಬಿಸಿವೆ. ಹೀಗಾಗಿ ಭಾರೀ ವಾಹನಗಳ ಓಡಾಟದಿಂದ ರಸ್ತೆ ಬಹುಬೇಗ ಹಾಳಾಗಿದೆ. ಪಟ್ಟಣದ ದೊಡ್ಡಹಳ್ಳ ಸಮೀಪ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಬೈಕ್ ಸವಾರರು ಪರದಾಡುವ ಸ್ಥಿತಿ ಇದೆ. ದೊಡ್ಡಹಳ್ಳದ ಸೇತುವೆ ಮೇಲೂ ರಸ್ತೆ ಹದಗೆಟ್ಟಿದ್ದು, ಮಳೆ ಬಂದಾಗಲೆಲ್ಲ ಸೇತುವೆ ಮೇಲೆ ನೀರು ನಿಲ್ಲುವ ಪರಿಣಾಮ ಸೇತುವೆ ಹಾಳಾಗುವ ಹಂತ ತಲುಪಿದೆ. ನಾಯಕನಹಟ್ಟಿ ಒಳಮಠದಿಂದ ಚಿಕ್ಕಕೆರೆವರೆಗೂ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳು ಬಿದ್ದಿವೆ. ಪಿಡಬ್ಲ್ಯುಡಿ ಇಲಾಖೆ ಗುಂಡಿ ಮುಚ್ಚುವ ಕೆಲಸ ಮಾಡುತ್ತದೆ. ಆದರೆ, ಬಹುಬೇಗ ರಸ್ತೆ ಹಾಳಾಗುತ್ತದೆ. ಇದಲ್ಲದೇ ನಾಯಕನಹಟ್ಟಿಯಿಂದ ಚನ್ನಬಸಯ್ಯನಹಟ್ಟಿ, ಗೌಡಗೆರೆ ಗೇಟ್, ಭೀಮಗೊಂಡನಹಳ್ಳಿ ಮೂಲಕ ಜಿಲ್ಲೆಯ ಗಡಿವರೆಗೂ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಪಟ್ಟಣ ದಾಟಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಳ್ಳಕೆರೆಯಿಂದ ತಾಲೂಕಿನ ಗಡಿ ಮುಸ್ಟೂರುವರೆಗೂ ಹೊಸದಾಗಿ ರಸ್ತೆ ನಿರ್ಮಿಸಿ ಪಟ್ಟಣಕ್ಕೆ ಬರುವ ಭಕ್ತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜಿಲ್ಲೆಯ ಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ, ಪಟ್ಟಣ ಸಮೀಪಿಸುತ್ತಿದ್ದಂತೆ ರಸ್ತೆಯ ಗುಂಡಿಗಳಿಂದ ನರಕ ದರ್ಶನವಾಗುತ್ತದೆ. ಏಕಾಂತೇಶ್ವರ ಮಠದಿಂದ ಪಟ್ಟಣದ ಚಿಕ್ಕಕೆರೆವರೆಗೂ ಸುಸಜ್ಜಿತ ರಸ್ತೆ ಅವಶ್ಯಕವಿದೆ.
ಸುಪುತ್ರಬಾಬು ಅಬ್ಬೇನಹಳ್ಳಿ, ನಾಯಕನಹಟ್ಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net