

ಮೊಳಕಾಲ್ಮೂರು: ಮೈಕ್ರೋ ಫೈನಾನ್ಸ್ ನಲ್ಲಿ ಗಿರವಿ ಇಟ್ಟ ಬಂಗಾರದ ಒಡವೆ ಗಳನ್ನು ಬಿಡಿಸಿಕೊಳ್ಳಲು ಕಾಲಾವಕಾಶ ನೀಡುವಂತೆ ಗ್ರಾಹಕರು ಶುಕ್ರವಾರ ಫೈನಾನ್ಸ್ ಸಿಬ್ಬಂದಿಗೆ ಒತ್ತಾಯಿಸಿದ ಪ್ರಕರಣ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಅನೇಕರು ಆಭರಣಗಳನ್ನು ಖಾಸಗಿ ಸಂಸ್ಥೆಯಲ್ಲಿ ಇಟ್ಟು ಲಾಂತರ ರೂ. ಹಣ ಸಾಲ ಪಡೆದಿದ್ದಾರೆ. ಆದರೆ, ಬಡ್ಡಿ ಹಣ ಪಾವತಿಸಿಲ್ಲ. ಹಾಗಾಗಿ, ಫೈನಾನ್ಸ್ ನಿಯಮದ ಅನುಸಾರ ನಿಗದಿತ ಅವಧಿ ಮೀರಿದೆ. ಪಡೆದಿರುವ ಹಣ ಮತ್ತು ಬಡ್ಡಿ ಸಮೇತ ಪಾವತಿ ಮಾಡಿ ಒಡವೆ ಬಿಡಿಸಿಕೊಳ್ಳಬೇಕು. ಒಟ್ಟು 63 ಮಂದಿ 59 ಲಕ್ಷ ರೂ. ಕಟ್ಟಬೇಕು. ಇಲ್ಲವಾದಲ್ಲಿ ಆಭರಣ ಹರಾಜು ಮಾಡಲಾಗುವುದು ಎಂಬ ಫೈನಾನ್ಸ್ ಕಂಪನಿಯವರು ಎಚ್ಚರಿಕೆ ಪತ್ರ ರವಾನಿಸಿದ್ದರು.
ಇದರಿಂದ ಗಾಬರಿಗೊಂಡ ಗ್ರಾಹಕರು ಶುಕ್ರವಾರ ಫೈನಾನ್ಸ್ ಕಚೇರಿಗೆ ಮುಗಿಬಿದ್ದಿದ್ದರು. ಬರದ ಪರಿಸ್ಥಿತಿಯಿದ್ದು ಕೈಯಲ್ಲಿ ಹಣ ಇಲ್ಲ. ಕಾಲಾವಕಾಶ ಕೊಡಬೇಕೆಂದು ಕೋರಿದರು. ಸಿಬ್ಬಂದಿ ಒಪ್ಪದ ಕಾರಣ ಕೆಲ ಹೊತ್ತು ವಾದ ವಿವಾದ ನಡೆಯಿತು. ಆಗ ಸಾರ್ವಜನಿಕರು ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆ ತಂದರು.
ಈ ಕುರಿತು ಪ್ರತಿಕ್ರಿಯಿಸಿದ ಪಿಎಸ್ಐ ಮಹೇಶ್ ಹೊಸಪೇಟೆ, ಗಿರವಿ ಇಟ್ಟ ಆಭರಣ ಮಾಲೀಕರು ಬಿಡಿಸಿಕೊಳ್ಳಲು 6 ತಿಂಗಳು ಕಾಲಾವಧಿ ಬೇಕು. ಇದರ ಬಗ್ಗೆ ನ್ಯಾಯ ಕೊಡಿಸಬೇಕೆಂದು ದೂರು ಕೊಟ್ಟಿದ್ದಾರೆ. ಇದನ್ನು ಕಾನೂನಿನ ಪರಿಧಿಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದರು.
ರಾಮು, ದರ್ಶನ, ರವಿಕುಮಾರ, ಮಂಜುನಾಥ, ಬಿ.ಮಹೇಶ, ಯರ್ರಿಸ್ವಾಮಿ, ರಾಜಣ್ಣ, ಗಂಗಮ್ಮ, ಪಾಪಯ್ಯ, ತಮ್ಮಣ್ಣ ಮೊದಲಾದವರು ಇದ್ದರು.
ಮೈಕ್ರೋ ಫೈನಾನ್ಸ್ ನಲ್ಲಿ ನಾನು 40 ಗ್ರಾಂ ಚಿನ್ನ ಅಡವಿಟ್ಟು 1.60 ಲಕ್ಷ ರೂ. ಸಾಲ ಪಡೆದಿದ್ದೆ. ಇಲ್ಲಿ ಕೆಲಸ ಮಾಡುತ್ತಿದ್ದ ಮುಬಾರಕ್ ಪಾಷಾ ಎಂಬಾತ ಹೆಚ್ಚಿಗೆ ಸಾಲ ಕೊಡುತ್ತೇವೆಂದು ದೂರವಾಣಿ ಕರೆ ಮೂಲಕ ಒಟಿಪಿ ಪಡೆದು 1.80 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿದ್ದಾನೆ. ಇರುವ ಸಿಬ್ಬಂದಿಯನ್ನು ಕೇಳಿದರೆ ಕೆಲಸ ಬಿಟ್ಟು ಹೋಗಿದ್ದಾನೆ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಈಗ ಒಟ್ಟು 4.40 ಲಕ್ಷ ರೂ. ಸಾಲದ ಮೊತ್ತ ಕಟ್ಟಬೇಕೆಂದು ನೋಟಿಸ್ ಕೊಟ್ಟಿದ್ದಾರೆ. ಇದರ ಬಗ್ಗೆ ಪೊಲೀಸ್ ಠಾಣೆಗೂ ದೂರ ಕೊಡಲಾಗಿದೆ ಎಂದು ಓದ್ನೋಬಯ್ಯಹಟ್ಟಿ ರವಿ ಅಳಲು ತೋಡಿಕೊಂಡರು.