

ಭರಮಸಾಗರ: ಬರದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ, ಬೆಳೆಗೆ ಬೆಂಬಲ ಬೆಲೆ ಇಲ್ಲ, ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳು ಲಭ್ಯವಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಕೂಡಲೇ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಶನಿವಾರ ಭರಮಸಾಗರದ ರೈತ ಸಂಪರ್ಕ ಕೇಂದ್ರದ ಮುಂದೆ ಜಮಾಯಿಸಿದ ರೈತ ಮುಖಂಡರು, ಬರ ಪರಿಹಾರ ವಿತರಣೆಯಲ್ಲಿ ವಿಳಂಬ, ಪರಿಹಾರದ ಮೊತ್ತದ ಕೊರತೆ ಹಾಗೂ ಕೃಷಿ ಪರಿಕರಗಳ ಅಭಾವದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಸಿಎಂ ರೈತರಿಗೆ ಬರ ಪರಿಹಾರವಾಗಿ 2,500 ರೂ. ನೀಡುವುದಾಗಿ ಹೇಳಿದ್ದರೂ, ಈ ಮೊತ್ತ ಇಂದಿನ ಕೃಷಿ ವೆಚ್ಚಕ್ಕೆ ಹೋಲಿಸಿದರೆ ಸಾಲದು. ಒಂದು ಚೀಲ ಗೊಬ್ಬರದ ಬೆಲೆ 2,800 ರೂ. ಆಗಿರುವಾಗ, ಬೀಜ, ಗೊಬ್ಬರ, ಕೂಲಿ ಹಾಗೂ ಇತರ ಕೃಷಿ ವೆಚ್ಚ ಹೇಗೆ ಭರಿಸಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತ ವಿಳಂಬವಿಲ್ಲದೆ ಪಾವತಿಸುವ ಜತೆಗೆ ಮೊತ್ತ ಹೆಚ್ಚಿಸಬೇಕು. ಮಳೆ ಕೊರತೆಯಿಂದ ಈಗಾಗಲೇ ಬೆಳೆ ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಹಾರವೂ ದೊರೆಯದಿರುವುದು ಬರೆ ಎಳೆದಂತಾಗಿದೆ ಎಂದರು. ರೈತ ಮುಖಂಡರಾದ ಮೋಹನ್, ಸತೀಶ್, ನಾಗರಾಜ್ ನಾಯ್ಕ್, ಶಿವಲಿಂಗಪ್ಪ, ಶಿವನಕೆರೆ ಹಾಗೂ ತಿಪ್ಪೇಸ್ವಾಮಿ ಇದ್ದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ತಾಡಪಾಲು, ಬೆಳೆ ಕಟಾವು, ಒಕ್ಕಲು ಕಾರ್ಯಕ್ಕೆ ಅಗತ್ಯ ಸಾಮಗ್ರಿ ಸಿಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಅನುದಾನದ ಕೊರತೆ ನೆಪ ಹೇಳಲಾಗುತ್ತಿದೆ. ಅಲ್ಪಸ್ವಲ್ಪ ಬೆಳೆದ ಬೆಳೆಯನ್ನಾದರೂ ರಕ್ಷಿಸಿಕೊಂಡು ಒಕ್ಕಲು ಮಾಡಲು ಅಗತ್ಯ ಪರಿಕರಗಳು ಲಭ್ಯವಿಲ್ಲದಿದ್ದರೆ ರೈತರು ಏನು ಮಾಡಬೇಕು ಎಂದು ರೈತರು ಪ್ರಶ್ನಿಸಿದರು. ಕೃಷಿ ಇಲಾಖೆ ರೈತರ ಅಗತ್ಯಗಳಿಗೆ ಆದ್ಯತೆ ನೀಡಬೇಕು. ತಾಡಪಾಲು, ಸ್ಪ್ರಿಂಕ್ಲರ್ ಸೇರಿ ರೈತರಿಗೆ ಅಗತ್ಯ ಕೃಷಿ ಉಪಕರಣ ತಕ್ಷಣ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆ ವಿಮೆ ಕಂತು ಪಾವತಿಸಿದ್ದರೂ ಬೆಳೆ ನಷ್ಟದ ವಿಮಾ ಪರಿಹಾರ ದೊರೆತಿಲ್ಲ. ತ್ವರಿತವಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ, ನಿಯಮಾನುಸಾರ ವಿಮಾ ಪರಿಹಾರ ಪಾವತಿಸಬೇಕು. ಬರದಿಂದ ಹಾನಿಗೀಡಾದ ತೋಟಗಾರಿಕಾ ಬೆಳೆಗೂ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ರೈತರು ಅನುಭವಿಸುತ್ತಿರುವ ಸಂಕಷ್ಟ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ರೈತರಿಗೆ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.