ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ಕೆಲ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಹಾಗೂ ನೂತನ ರೈಲುಗಳ ಓಡಾಟ, ರೈಲ್ವೆ ಮೇಲು ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಒತ್ತಾಯಿಸಿ ಸಂಸದ ಗೋವಿಂದ ಎಂ. ಕಾರಜೋಳ ಅವರು, ಹೊಸದಿಲ್ಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿವೈಷ್ಣವ್ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.
ಹೊಸದುರ್ಗ ರೋಡ್ ರೈಲು ನಿಲ್ದಾಣದಲ್ಲಿ ವಾಸ್ಕೋಡಾಗಾಮ-ಯಶವಂಪುರ ಎಕ್ಸ್ಪ್ರೆಸ್, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್, ಚಾಲುಕ್ಯ ಎಕ್ಸ್ಪ್ರೆಸ್, ಹೊಳಲ್ಕೆರೆ ರೈಲು ನಿಲ್ದಾಣದಲ್ಲಿ ಸಿದ್ಧಗಂಗಾ ಇಂಟರ್‌ಸಿಟಿ, ವಾಸ್ಕೋಡಾಗಾಮ, ವಿಶ್ವಮಾನವ, ವಿಜಯಪುರ-ಹಾಸನ-ಮಂಗಳೂರು ರೈಲುಗಳ ನಿಲುಗಡೆ.
ರಾಮಗಿರಿ ರೈಲು ನಿಲ್ದಾಣದಲ್ಲಿ ಸಿದ್ಧಗಂಗಾ ಇಂಟರ್‌ಸಿಟಿ, ವಾಸ್ಕೋಡಾಗಾಮ, ಕಾರಟಗಿ-ಯಶವಂತಪುರ ಟ್ರೆÊನುಗಳ ನಿಲುಗಡೆ, ಚಿಕ್ಕ ಜಾಜೂರಲ್ಲಿ ಕರ್ನಾಟಕ ಸಂಪರ್ಕ ಕ್ರಾಂತಿ, ಚಳ್ಳಕೆರೆ ರೈಲು ನಿಲ್ದಾಣದಲ್ಲಿ ಮೈಸೂರು-ಸಾಯಿನಗರ ಶಿರಡಿ ರೈಲು, ಸಿಂಧನೂರು ಎಕ್ಸ್ಪ್ರೆಸ್ ಟ್ರೆÊನುಗಳ ನಿಲುಗಡೆ.
ಕೋವಿಡ್ ವೇಳೆ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ ಹೊಸಪೇಟೆ-ಬೆಂಗಳೂರು, ಶಿವಮೊಗ್ಗ ಚನ್ನೆÊವಯಾ ಚಿತ್ರದುರ್ಗ, ಬಳ್ಳಾರಿ, ರೇನುಗುಂಟ ಟ್ರೆÊನುಗಳನ್ನು ಮರು ಪ್ರಾರಂಭಿಸಬೇಕು. ಈಗ ಚಿಕ್ಕಜಾಜೂರುವರೆಗಿರುವ ಹುಬ್ಬಳ್ಳಿ-ಚಿತ್ರದುರ್ಗ ಪ್ಯಾಸೆಂಜರ್ ರೈಲಿನ ಸಂಚಾರವನ್ನು ಮೊದಲಿದ್ದಂತೆ ಚಿತ್ರದುರ್ಗದವರೆಗೆ ವಿಸ್ತರಿಸುವುದು.
ಬೀದರ್‌ನಿಂದ ಚಿತ್ರದುರ್ಗ ಮಾರ್ಗವಾಗಿ ಮಂಗಳೂರಿಗೆ, ವಿಜಯಪುರದಿಂದ ಚಿತ್ರದುರ್ಗ ಮಾರ್ಗವಾಗಿ ಮೈಸೂರಿಗೆ ಹಾಗೂ ಶಿವಮೊಗ್ಗದಿಂದ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ಹೊಸದಾಗಿ ರೈಲು ಸಂಚಾರ ಪ್ರಾರಂಭಿಸಬೇಕು.
ಚಳ್ಳಕೆರೆ ನಗರದ ಎಲ್‌ಸಿ ೪೫, ರಾಮಗಿರಿ ಬಳಿಯ ಎಲ್‌ಸಿ ೭೭ ಎ., ಬೇಡರೆಡ್ಡಿಹಳ್ಳಿ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಗೆ ಮೇಲುಸೇತುವೆ ನಿರ್ಮಾಣ, ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ಮುಖ್ಯರಸ್ತೆಯಿಂದ ರೈಲ್ವೆ ಸ್ಟೇಷನ್‌ವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಬೇಕೆಂಬ ಮನವಿಗೆ ಸ್ಪಂದಿಸಿರುವ ಸಚಿವರು, ರೈಲುಗಳ ನಿಲುಗಡೆ ಕುರಿತು ಕಾರ್ಯಸಾಧ್ಯತಾ ವರದಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.