ಭದ್ರಾ ಯೋಜನೆ ಅನುಷ್ಠಾನದಲ್ಲಿ ಶಾಸಕರ ನಿರಾಸಕ್ತಿ bhadra

ಮೊಳಕಾಲ್ಮೂರಿನಲ್ಲಿ ರೈತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಬೇಡರಡ್ಡಿಹಳ್ಳಿ ಬಸವರಡ್ಡಿ, ದೊಣ್ಣೆಹಳ್ಳಿ ಗುರುಮೂರ್ತಿ, ರಾಜಶೇಖರ ನಾಯಕ, ರವಿಕುಮಾರ ಇದ್ದರು. bhadra
ಮೊಳಕಾಲ್ಮೂರಿನಲ್ಲಿ ರೈತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಬೇಡರಡ್ಡಿಹಳ್ಳಿ ಬಸವರಡ್ಡಿ, ದೊಣ್ಣೆಹಳ್ಳಿ ಗುರುಮೂರ್ತಿ, ರಾಜಶೇಖರ ನಾಯಕ, ರವಿಕುಮಾರ ಇದ್ದರು. bhadra
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಯಾದವರಡ್ಡಿ ಅಸಮಾಧಾನ
  • ಸಂಘಟನೆಗಳ ನೇತೃತ್ವದಲ್ಲಿ ರೈತರ ಸಮಾವೇಶ
  • ಶಾಸಕರ ಧ್ವನಿ ಅಡಗಿರುವುದು ನೋವಿನ ಸಂಗತಿ
ಮೊಳಕಾಲ್ಮೂರು: ಮಧ್ಯ ಕರ್ನಾಟಕದ ಬಯಲುಸೀಮೆ ಹಸಿರೀಕರಣಕ್ಕೆ ಅಪ್ಪರ್ ಭದ್ರಾ ಯೋಜನೆಯನ್ನು ಸಮರೋಪಾದಿಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಜಿಲ್ಲೆಯ ಶಾಸಕರ ಧ್ವನಿ ಅಡಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಚಿಂತಕ ಯಾದವರಡ್ಡಿ ಬೇಸರ ವ್ಯಕ್ತಪಡಿಸಿದರು. 
ಪಟ್ಟಣದ ಬಸ್ ನಿಲ್ದಾಣದಲ್ಲಿ ರೈತಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಶಾಶ್ವತ ನೀರಾವರಿಗೆ ವೇಗ ತರುವ ಕುರಿತು ಗುರುವಾರ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದರು.
ಮಾಜಿ ಸಿಎಂ ಎಸ್. ನಿಜಲಿಂಗಪ್ಪ, ಜೆ.ಎಚ್. ಪಟೇಲ್ ಕಾಲದಲ್ಲಿ ಹುಟ್ಟಿಕೊಂಡ ಅಪ್ಪರ್ ಭದ್ರಾ ಯೋಜನೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಆಮೆಗತಿಯಲ್ಲಿದೆ. ಇದರ ಬಗ್ಗೆ ಚಳ್ಳಕೆರೆ ಶಾಸಕ ರಘುಮೂರ್ತಿ ಅವರು ಸದನದಲ್ಲಿ ಒಂದೆರಡು ಬಾರಿ ಧ್ವನಿ ಎತ್ತಿರುವುದು ಬಿಟ್ಟರೆ ಬೇರಾವ ಶಾಸಕರೂ ಸರ್ಕಾರದ ಕಣ್ತೆರೆಸಿಲ್ಲ. ಸಂಘಟಿತ ಹೋರಾಟದ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ರೈತರು ಸಜ್ಜಾಗಬೇಕು ಎಂದು ಕರೆ ಕೊಟ್ಟರು. 
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ಬರದ ನಾಡು ಹಸಿರೀಕರಣಕ್ಕೆ ಕಳೆದ 35 ವರ್ಷಗಳಿಂದ ಅವಿರತ ಹೋರಾಟದ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದರೂ ಜಿಲ್ಲೆಯ ಒಂದು ಕೆರೆಗೂ ಬೊಗಸೆ ನೀರು ಬಂದಿಲ್ಲ. ಇದು ಜಿಲ್ಲೆಯ ಜನರಿಗೆ ಮಾಡಿದ ಮಾಹಾ ಮೋಸ. ಸತತ ಮಳೆಯ ಅಭಾವ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಸಾವಿರ ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಬೆಳೆ ನಷ್ಟಕ್ಕೆ ತುತ್ತಾದ ಸಂಕಷ್ಟದಲ್ಲಿ ಬದುಕು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕಂಡೂ ಕಾಣದಂತೆ ವರ್ತಿಸುತ್ತಿರುವ ರಾಜಕೀಯ ನಾಯಕರಿಗೆ ಜನ, ಜಾನುವಾರುಗಳ ಶಾಪ ತಟ್ಟದೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳು ತೀವ್ರತರವಾದ ಬರ ಎದುರಿಸುತ್ತಿವೆ. ಶಿಕ್ಷಣದ ಮೂಲಕವಾದರೂ ಸಬಲೀಕರಣ ಹೊಂದಲು ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸುವ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಕೊರತೆ ಇರುವ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳನ್ನು ತುಂಬಬೇಕು. ಅಗತ್ಯ ಮೂಲ ಸೌಕರ್ಯ, ವಸತಿ ರಹಿತ ಕೂಲಿಕಾರ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಿದ್ದಯ್ಯನಕೋಟೆ ಶ್ರೀಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೋರಾಟಗಾರ ದೊಣ್ಣೆಹಳ್ಳಿ ಗುರುಮೂರ್ತಿ, ಪಪಂ ಮಾಜಿ ಅಧ್ಯಕ್ಷ ಜಿ. ಪ್ರಕಾಶ, ವಕೀಲ ರಾಜಶೇಖರ ನಾಯಕ, ರೈತ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ, ಪಿಎಸ್‌ಐ ಮಹೇಶ್ ಹೊಸಪೇಟೆ, ಎಸ್. ಬಡೋಬನಾಯಕ, ಕಾತಿಮಾಸ್ತರ್, ಕೆ. ಜಗಲೂರಯ್ಯ, ಮಾರನಾಯಕ, ರುದ್ರಯ್ಯ, ಕೊಂಡಾಪುರ ಪರಮೇಶಿ, ಸಂಜೀವಮೂರ್ತಿ, ಮರಿಸ್ವಾಮಿ, ನಾಗರಾಜ, ರಾಜಣ್ಣ, ಕೆ.ಎಚ್. ಸಣ್ಣಯಲ್ಲಪ್ಪ, ಎಸ್. ಪರಮೇಶ, ತಿಪ್ಪೇಸ್ವಾಮಿ. ಚಂದ್ರಣ್ಣ ಇತರರಿದ್ದರು. 
"

ಕವಲೊಡೆದಿರುವ ರೈತ ಸಂಘಟನೆಗಳು ಜೇನುಗೂಡಿನಂತೆ ಒಗ್ಗಟ್ಟಿನಿಂದ ಒಂದು ಶಕ್ತಿಯಾಗಿ ನಿಲ್ಲಬೇಕು. ಆಗ ಆಳುವ ಸರ್ಕಾರಗಳು ಸರಿದಾರಿಗೆ ಬರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net