ಒಣಗಲಾರಂಭಿರುವ ಸಿರಿಧಾನ್ಯ ಬೆಳೆಗಳು

 ಮಳೆಯಾಗದೆ ಹೊಸದುರ್ಗ ತಾಲೂಕಿನ ರಂಗವ್ವನಹಳ್ಳಿಯಲ್ಲಿ ಒಣಗುತ್ತಿರುವ ಸಾವೆ ಬೆಳೆ.
ಮಳೆಯಾಗದೆ ಹೊಸದುರ್ಗ ತಾಲೂಕಿನ ರಂಗವ್ವನಹಳ್ಳಿಯಲ್ಲಿ ಒಣಗುತ್ತಿರುವ ಸಾವೆ ಬೆಳೆ.
Published on

ಪ್ರಮುಖ ಮುಖ್ಯಾಂಶಗಳು

  • ವರುಣನ ಅವಕೃಪೆಗೆ ರೈತಾಪಿ ವರ್ಗದಲ್ಲಿ ಆವರಿಸಿದ ಚಿಂತೆ
  • ಹೊಸದುರ್ಗ ಬರಗಾಲದ ಛಾಯೆ
ಎಂ. ಯೋಗೀಶ, ಹೊಸದುರ್ಗ
ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕ ತಲ್ಲಣಿಸುತಾವೋ ಎನ್ನುವ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಮಳೆ ಅಭಾವದಿಂದ ತಾಲೂಕಿನಲ್ಲಿ ಮುಂಗಾರು ಬಿತ್ತನೆಯಾಗದೆ ಬರ ಆವರಿಸಿದೆ. ಬಿತ್ತನೆಗೆ ಸಿದ್ಧ ಮಾಡಿಟ್ಟುಕೊಂಡಿದ್ದ ಬೀಜ ಮನೆಯಲ್ಲೇ ಉಳಿದಿದೆ. ವರುಣದೇವನ ಅವಕೃಪೆಯಿಂದ ರೈತರನ್ನು ಚಿಂತೆ ಆವರಿಸಿಕೊಂಡಿದೆ.
ಸಿರಿಧಾನ್ಯಗಳ ಕಣಜ ಎಂದೇ ಹೆಸರಾಗಿರುವ ತಾಲೂಕಿನಲ್ಲಿ ಸಿರಿಧಾನ್ಯ ಬೆಳೆಗಳು ಸಂಪೂರ್ಣ ಹಾಳಾಗಿವೆ. ಅಲ್ಪಸ್ವಲ್ಪ ಬಿದ್ದ ಮಳೆಗೆ ಕೆಲವರು ಸಾವೆ ಬಿತ್ತನೆ ಮಾಡಿದ್ದರು. ಆದರೆ, ಮಳೆಯಿಲ್ಲದೆ ಸಂಪೂರ್ಣ ಒಣಗಿವೆ.
ತಾಲೂಕಿನ 56 ಸಾವಿರ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿಯಿತ್ತು. ಮಳೆ ಅಭಾವದಿಂದ ಬಿತ್ತನೆ ಪ್ರದೇಶ 10 ಸಾವಿರ ಹೆಕ್ಟೇರ್ ದಾಟಿಲ್ಲ. ಬಿತ್ತನೆಯಾದ ಮೆಕ್ಕೆಜೋಳ, ಹತ್ತಿ ಬೆಳೆಗಳೂ ಬೆಳವಣಿಗೆ ಕಂಡಿಲ್ಲ.
ತಾಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಸಾವೆ ಬಿತ್ತನೆ ಪ್ರದೇಶವಿದೆ. ಸಿರಿಧಾನ್ಯ ಬೆಳೆಗೆ ಸರ್ಕಾರ ಸಹಾಯಧನ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾವೆ ಬಿತ್ತನೆ ಪ್ರದೇಶ ವಿಸ್ತರಣೆಯಾಗುವ ನಿರೀಕ್ಷೆ ಇತ್ತು. ಕಳೆದ ವರ್ಷ ಕೂಡ ಸರಿಯಾಗಿ ಮಳೆಯಾಗದ ಕಾರಣ 16 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಈ ವರ್ಷ ಕೇವಲ 6 ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿದೆ. ಅದು ಕೂಡ ಕಾಳು ಕಟ್ಟುವ ಹಂತಕ್ಕೆ ಬೆಳೆದು ಒಣಗಲಾರಂಭಿಸಿದೆ.
ಕ್ವಿಂಟಾಲ್ ಸಾವೆಯ ದರ ಮಾರುಕಟ್ಟೆಯಲ್ಲಿ 4500 ರೂ. ಆಸುಪಾಸಿನಲ್ಲಿತ್ತು. ಸಾವೆ ಬೆಳೆ ವಿಫಲವಾದ ಕಾರಣ ಬೆಲೆ 7 ಸಾವಿರದ ಗಡಿ ದಾಟಿದೆ. ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಹತ್ತಿ ಹಾಗೂ ಎಳ್ಳು ಬಿತ್ತನೆ ಸಾಧ್ಯವಾಗಲಿಲ್ಲ. ಬೆಳೆ ನಷ್ಟದಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಪ್ರತಿವರ್ಷ ತಾಲೂಕಿನಲ್ಲಿ 65 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗುತ್ತದೆ. ಅವಧಿ ಮುಗಿಯುತ್ತಾ ಬಂದರೂ ಮಳೆಯಾಗದ ಹಿನ್ನೆಲೆಯಲ್ಲಿ ಬಿತ್ತನೆ ಆರಂಭವಾಗಿಲ್ಲ. ಇದು ರೈತರ ಆತಂಕ ಹೆಚ್ಚಿಸಿದೆ. ಕೃಷಿ ಇಲಾಖೆ ರಾಗಿ ರೈತರ ಅನಾನುಕೂಲಕ್ಕೆ ರಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಟ್ಟುಕೊಂಡಿದೆ. ಮಣೆ ಬರುವ ನಂಬಿಕೆ ಇಲ್ಲದೆ ರೈತರು ಖರೀದಿಗೆ ಆಸಕ್ತಿ ತೋರುತ್ತಿಲ್ಲ.
ಅಂತರ್ಜಲ ಕುಸಿತ: ಕಳೆದ ವರ್ಷ ಕೂಡ ಉತ್ತಮ ಮಳೆಯಾಗದೆ ಕೆರೆ, ಕಟ್ಟೆಗಳು ತುಂಬಿರಲಿಲ್ಲ. ಈ ವರ್ಷ ಕೂಡ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆ ಬಾವಿಗಳು ಬತ್ತಿ ಹೋಗಲಾರಂಭಿಸಿದ್ದು, ಅಡಿಕೆ, ತೆಂಗು ಹಾಗೂ ದಾಳಿಂಬೆ ತೋಟಗಳನ್ನು ಉಳಿಸಿಕೊಳ್ಳುವ ಸವಾಲು ರೈತರದ್ದಾಗಿದೆ.
ಬತ್ತಿದ ಕೆರೆಗಳು: ತಾಲೂಕಿನ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರಿದ್ದರೂ ಹಿನ್ನೀರು ಪ್ರದೇಶದ ಬೋರ್‌ವೆಲ್‌ಗಳು ಬರಿದಾಗಿವೆ. ಅಲ್ಪಸ್ವಲ್ಪವಾದರೂ ಮಳೆ ಬರದಿದ್ದರೆ ಜಾನುವಾರು ಕುಡಿವ ನೀರು, ಮೇವಿಗೂ ಸಂಕಷ್ಟ ಎದುರಸಬೇಕಾಗುತ್ತದೆ.
ಹಿಂಗಾರು ಬೆಳೆಗಳಿಗಾದರೂ ಮಳೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೃಷಿ ನಂಬಿದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಬರ ಘೋಷಣೆ ಮಾಡಿ ವಿಶೇಷ ಪ್ಯಾಕೇಜ್ ಮೂಲಕ ರೈತರ ನೆರವಿಗೆ ಬರಬೇಕು ಎನ್ನುವುದು ಅನ್ನದಾತರ ಮನವಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net