

ಚಿತ್ರದುರ್ಗ: ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ಜಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಸ್ಥಳಗಳಿಗೆ ಜಿಪಂ ಸಿಇಒ ಡಾ.ಎಸ್. ಆಕಾಶ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಕೊಳಹಾಳ್, ಮುದ್ದಾಪುರ ಹಾಗೂ ಐನಹಳ್ಳಿ ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆರೆ ಮತ್ತು ಗೋ ಕಟ್ಟೆ ಪುನಶ್ಚೇತನ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಸಿಇಒ, ಬಳಿಕ ಐನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೊಳವೆಬಾವಿ ಮರುಪೂರಣ ಘಟಕಗಳ ಕಾಮಗಾರಿ ವೀಕ್ಷಿಸಿದರು. ಮೊಬೈಲ್ ಆ್ಯಪ್ ಮೂಲಕ ಕಾರ್ಮಿಕರ ಎನ್ಎಂಎAಎಸ್ ಆನ್ಲೈನ್ ಹಾಜರಾತಿ ಪರಿಶೀಲಿಸಿದರು. ಜಾಬ್ಕಾರ್ಡ್ ಹಾಗೂ ಬ್ಯಾಂಕ್ಪಾಸ್ ಪುಸ್ತಕ ಪರಿಶೀಲಿಸಿ, ಸಮಯಕ್ಕೆ ಸರಿಯಾಗಿ ಕೂಲಿ ಹಣ ಜಮೆಯಾಗುತ್ತಿದೆಯೇ? ಎಂದು ವಿಚಾರಿಸಿದರು.
ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುತ್ತಿಲ್ಲ. ಕೂಡಲೇ ನಿಯಮಿತವಾಗಿ ಕೂಲಿ ಜಮೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಕಾರ್ಮಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಇಒ, ತಾಂತ್ರಿಕ ಸಮಸ್ಯೆಯಿಂದಾಗಿ ಖಾತೆಗೆ ಹಣ ಜಮೆಯಾಗುವುದು ವಿಳಂಬವಾಗಿತ್ತು. ಸದ್ಯ ಈ ತಾಂತ್ರಿಕ ತೊಂದರೆ ಬಗೆಹರಿದಿದ್ದು, ಸರಿಯಾಗಿ ಹಣ ಪಾವತಿಯಾಗಲಿದೆ ಎಂದು ಭರವಸೆ ನೀಡಿದರು.
ಕೆಲಸದ ಸ್ಥಳದಲ್ಲಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಪರಿಶೀಲಿಸಿದ ಅವರು, ಕೆಲಸ ನಿರ್ವಹಿಸುವಾಗ ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾದರೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು. ತಾಪಂ ಇಒ ಡಾ. ಪ್ರಮೋದ್, ತಾಲೂಕು ಸಹಾಯಕ ನಿರ್ದೇಶಕ ಯರಿಸ್ವಾಮಿ, ಜಿಪಂ ಎಡಿಪಿಸಿ ಮೋಹನ್ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ತಾಲೂಕು ತಾಂತ್ರಿಕ ಸಂಯೋಜಕ ರಮೇಶ್ ಹಾಗೂ ಶಶಿಧರ್, ತಾಲೂಕು ಐಇಸಿ ಸಂಯೋಜಕ ಸತ್ಯನಾರಾಯಣ, ಪಿಡಿಒ ಅಽಕಾರಿ, ಸಿಬ್ಬಂದಿ ಇದ್ದರು.
ಬಾಕ್ಸ್..
ಗುಳೆ ಹೋಗದಿರಿ
ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ೧೨೫ ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ. ಲಿಂಗ, ತಾರತಮ್ಯವಿಲ್ಲದೆ ಪುರುಷ ಮತ್ತು ಮಹಿಳೆಯರಿಗೆ ದಿನಕ್ಕೆ ೩೮೨ರೂ. ಸಮಾನ ಕೂಲಿ ನೀಡಲಾಗುತ್ತದೆ. ಹೀಗಾಗಿ, ಯಾರೂ ಕೆಲಸ ಅರಸಿ ಗುಳೆ ಹೋಗಬಾರದು. ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶೀಘ್ರದಲ್ಲೇ ವಿವಿಧ ಅನುಷ್ಠಾನ ಇಲಾಖೆಗಳ ಕಾಮಗಾರಿಗಳೂ ಪ್ರಾರಂಭವಾಗಲಿದ್ದು, ಅಲ್ಲೂ ಕೆಲಸ ಮಾಡಬಹುದು ಎಂದು ಸಿಇಒ ತಿಳಿಸಿದರು.