ನಾಡಿನಲ್ಲಿ ಪಸರಿಸಲಿ ಕನಕದಾಸರ ಆಶಯಗಳು

ಹಿರಿಯೂರಿನಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ನಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಬಿ.ಪಿ.ತಿಪ್ಪೇಸ್ವಾಮಿ, ರಂಗಪ್ಪ, ಮಂಜು ಇತರರು ಇದ್ದರು.
ಹಿರಿಯೂರಿನಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ನಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಬಿ.ಪಿ.ತಿಪ್ಪೇಸ್ವಾಮಿ, ರಂಗಪ್ಪ, ಮಂಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಅನಿಸಿಕೆ
  • ಹಿರಿಯೂರಿನಲ್ಲಿ ಜಯಂತಿ ಆಚರಣೆ
  • ಕನಕದಾಸರ ಕುರಿತ ಚರ್ಚೆಗಳನ್ನು ಮುನ್ನೆಲೆಗೆ ತರಬೇಕಿದೆ
ಹಿರಿಯೂರು: ಎಲ್ಲರಿಗೂ ಮಾದರಿಯಾದ ಕನಕದಾಸರ ಆದರ್ಶಗಳು ನಾಡಿನಲ್ಲಿ ಪಸರಿಸಲಿ, ಸಮಾನತೆಯ ಹೂವು ಅರಳಲಿ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಕದಾಸರನ್ನು ಜಾತಿ ಮೀರಿದ ನೆಲೆಯಲ್ಲಿ ಜನಮಾನಸದಲ್ಲಿ ನೆಲೆಗೊಳಿಸಲು ಪೂರಕ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕನಕದಾಸರ ಕುರಿತ ಚರ್ಚೆಗಳನ್ನು ಮುನ್ನೆಲೆಗೆ ತರಬೇಕಿದೆ ಎಂದರು.
'ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎನ್ನುವ ಪ್ರಶ್ನೆಯೊಂದು ಮತ್ತೆ ಮತ್ತೆ ಎದುರಾಗುತ್ತದೆ. ಮನುಕುಲ ಉತ್ತರಿಸಲಾಗದ ಜಟಿಲ ಪ್ರಶ್ನೆಯೊಂದನ್ನು ಕನಕದಾಸರು ಕೇಳಿದ್ದಾರೆ. ಈ ಪ್ರಶ್ನೆಗೆ ಈ ತನಕವೂ ಉತ್ತರ ಸಿಕ್ಕಿಲ್ಲ ಎಂದರು.
ಕನಕ ಕವಿಯಾದ ಕಾರಣ ದಾಸತ್ವವನ್ನೂ ಮೀರಲು ಸಾಧ್ಯವಾಗಿದೆ. ಅವರು ತಮ್ಮ ಸುತ್ತಲಿನ ಪರಿಸರವನ್ನು ನೋಡಿದ ದೃಷ್ಟಿ, ಸಮಾಜಿಕ ನ್ಯಾಯದ ನೆಲೆಯಲ್ಲಿ ರೂಪಿಸಿಕೊಂಡ ವೈಚಾರಿಕತೆ ಮತ್ಯಾವ ದಾಸರಿಗೂ ಅದು ಸಾಧ್ಯವಾಗಲಿಲ್ಲ ಎಂದರು.
ದಾಸಸಾಹಿತ್ಯದ ಚಿಂತನೆಗಳನ್ನು ಗಮನಿಸಿದರೆ ಕನಕದಾಸರು ಯಾವ ಯಾವ ಸಂಗತಿಗಳಿಗೆ, ಕಾರಣಗಳಿಗೆ, ಸಮರ್ಥನೆಗಳಿಗೆ ಉಲ್ಲೇಖವಾಗುತ್ತಾರೆ ಎಂದು ಪಟ್ಟಿಮಾಡಿದರೆ ಕುತೂಹಲಕಾರಿ ಸಂಗತಿಗಳು ಬಯಲಾಗುತ್ತವೆ ಎಂದು ತಿಳಿಸಿದರು.
ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಒಂದು ಕುಲದ ವೃತ್ತಿಯನ್ನು ಸ್ವಾಭಿಮಾನದ ಸಂಕೇತವಾಗಿ ಕಾಣುತ್ತಾರೆ. ಅವರ ಕೀರ್ತನೆಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷ ಲೋಕಿಕೆರೆ ಮಂಜುನಾಥ್, ಮುಖಂಡ ತುರುವನೂರು ಜಗನ್ನಾಥ್, ಪ್ರಾಚಾರ್ಯ ಕೆ. ರಂಗಪ್ಪ, ಮುಖ್ಯ ಶಿಕ್ಷಕ ನಯಾಜ್, ಉಪನ್ಯಾಸಕರಾದ ಎಚ್.ಆರ್. ಲೋಕೇಶ್, ಈ. ನಾಗೇಂದ್ರಪ್ಪ, ಶಾಂತಕುಮಾರ್, ಮಂಜು, ಶಾಂತಲಾ, ರೇಷ್ಮಾ, ಪ್ರಕಾಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net