ಮುಖ್ಯಮಂತ್ರಿ ನೇತೃತ್ವದ ಪ್ರಜಾಸೇವಾ ಆಂದೋಲನಕ್ಕೆ ಸಿದ್ಧತೆ ಕೈಗೊಳ್ಳಿ

ಹಿರಿಯೂರಲ್ಲಿ ವಿವಿಧ ಇಲಾಖಾಧಿಕಾರಿಗಳ ಸರಣಿ ಸಭೆ
Verification
ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದ ಸಿದ್ಧತೆಯನ್ನು ಡಿಸಿ ರಮ್ಯಾ ಪರಿಶೀಲಿಸಿದರು. ಜಿಪಂ ಸಿಇಒ ಡಾ.ಆಕಾಶ್, ಎ. ವಾಸೀಂ ಇದ್ದರು.Verification
Published on: 

ಹಿರಿಯೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ ನ.21ರಂದು ಶನಿವಾರ ಬೆಳಗ್ಗೆ 11ಕ್ಕೆ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಯಾವುದೇ ಲೋಪವಾಗದಂತೆ ನಡೆದುಕೊಳ್ಳಲು ಸೂಕ್ತ ಸಿದ್ಧತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಕಾರ್ಯಕ್ರಮದ ವೇಳೆ ಪ್ರತಿ ಮಳಿಗೆಗೂ ಭೇಟಿ ನೀಡಿ ಪರಿಶೀಲಿಸುವುದರಿಂದ, ಎಲ್ಲ ಇಲಾಖೆಗಳು ತಮ್ಮ ಇತ್ತೀಚಿನ ಯೋಜನೆಗಳು ಮತ್ತು ಸಾಧನೆಗಳನ್ನು ಅರ್ಥಪೂರ್ಣವಾಗಿ ಪ್ರದರ್ಶಿಸಬೇಕು. ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನಕ್ಕೆ ಮಳಿಗೆಗಳನ್ನು ವ್ಯವಸ್ಥೆ ಮಾಡಬೇಕು. ವಿಶೇಷವಾಗಿ ಸಾವಯವ ಕೃಷಿ, ಜೈವಿಕ ಗೊಬ್ಬರ, ನೂತನ ಕೃಷಿ ತಂತ್ರಜ್ಞಾನ ಹಾಗೂ ಪೌಷ್ಟಿಕಾಂಶ ಅಭಿಯಾನದ ಕುರಿತು ವಿಶೇಷ ಮಳಿಗೆಗಳನ್ನು ತೆರೆಯಲು ಅವರು ಸೂಚಿಸಿದರು.

ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ, ರೇಷ್ಮೆ ಇಲಾಖೆಯ ನೂತನ ಕಾರ್ಯಕ್ರಮಗಳು ಹಾಗೂ ಬೆಳೆ ವಿಮೆ ಪರಿಹಾರ ವಿತರಣೆಯ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಬೆಳೆ ಕಟಾವು ಪ್ರಯೋಗಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಅರ್ಹ ರೈತರಿಗೆ ಶೀಘ್ರವಾಗಿ ವಿಮಾ ಪರಿಹಾರ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಜಾಸೇವಾ ಆಂದೋಲನದ ಯಶಸ್ಸಿಗೆ ಕೈಗೊಳ್ಳಬೇಕಾದ ಸಿದ್ಧತೆಗಳು ಹಾಗೂ ಸಾರ್ವಜನಿಕರಿಗೆ ತಲುಪಿಸಬೇಕಾದ ಸರ್ಕಾರಿ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯ ನಂತರ ಜಿಲ್ಲಾಧಿಕಾರಿ ಎಸ್. ರಮ್ಯಾ ಮತ್ತು ವಿವಿಧ ಇಲಾಖಾ ಮುಖ್ಯಸ್ಥರು ಕಾರ್ಯಕ್ರಮ ನಡೆಯುವ ನೆಹರೂ ಮೈದಾನಕ್ಕೆ ಭೇಟಿ ನೀಡಿ, ಮಳಿಗೆಗಳ ನಿರ್ಮಾಣಕ್ಕೆ ಇರುವ ಸ್ಥಳಾವಕಾಶ ಪರಿಶೀಲಿಸಿದರು.

ಸಾರ್ವಜನಿಕರಿಂದ ಈಗಾಗಲೇ ಸ್ವೀಕರಿಸಲಾದ ಹಾಗೂ ಕಾರ್ಯಕ್ರಮದ ದಿನದಂದು ಸ್ವೀಕರಿಸುವ ಅರ್ಜಿಗಳನ್ನು ವ್ಯವಸ್ಥಿತವಾಗಿ ದಾಖಲಿಸಿ, ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಸಿಇಒ ಡಾ.ಎಸ್. ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠ್ಠಾಧಿಕಾರಿ ಶಿವಕುಮಾರ್, ನಗರಸಭೆ ಪೌರಾಯುಕ್ತ ಎ. ವಾಸೀಂ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಡಾ.ಜಿ. ಸವಿತಾ, ಕೃಷಿ ಅಧಿಕಾರಿ ಜೆ. ಅಶೋಕ್, ಎಡಿಎಲ್‌ಆರ್ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನೆಹರೂ ಮೈದಾನದಲ್ಲಿ ವೇದಿಕೆ

ಪ್ರಜಾಸೇವಾ ಅಭಿಯಾನಕ್ಕೆ ಸಿಎಂ ಡಿಕೆಶಿ ಭೇಟಿ ಹಿನ್ನೆಲೆ ಹಿರಿಯೂರಿನಲ್ಲಿ ಜಿಲ್ಲಾ ಸಚಿವ ಟಿ. ರಘುಮೂರ್ತಿ, ಡಿಸಿ ರಮ್ಯಾ ನೇತೃತ್ವದಲ್ಲಿ ಸರಣಿ ಸಭೆ ನಡೆಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದು, ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಕಟ್ಟಪ್ಪಣೆ ಮಾಡಲಾಗಿದೆ. ನಗರದ ನೆಹರು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಪ್ರಜಾಸೇವಾ ಅಭಿಯಾನದ ಮೂಲಕ ಉಪ ಚುನಾವಣೆಗೆ ರಣಕಹಳೆ ಮೊಳಗಿಸಲು ಸರ್ಕಾರ ಸಜ್ಜಾಗಿದೆ.