

ಪ್ರಮುಖ ಮುಖ್ಯಾಂಶಗಳು
ಐಮಂಗಲ: ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದ ಆರಾಧ್ಯ ದೈವವಾದ ಶ್ರೀ ಕಾಲಭೈರವೇಶ್ವರ ಸ್ವಾಮಿ ಯಾನೆ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಕಡೆ ಕಾರ್ತಿಕೋತ್ಸವವನ್ನು ಅದ್ದೂರಿ ಮತ್ತು ಸಾಂಪ್ರದಾಯಿಕ ವೈಭವದಿಂದ ಆಚರಿಸಲಾಯಿತು.
ಕಾರ್ತಿಕ ಮಾಸದ ಈ ಶುಭ ಸಮಾರಂಭಕ್ಕಾಗಿ ಬೆಳಗ್ಗೆಯಿಂದಲೇ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನಡೆದವು. ದೇವರಿಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು.
ನಂತರ ಉತ್ಸವ ಮೂರ್ತಿಗೆ ವಿಶೇಷವಾಗಿ ಬೆಳ್ಳಿಯ ಕವಚ ತೊಡಿಸಿ ಅಲಂಕರಿಸಲಾಯಿತು. ಇಡೀ ದೇವಸ್ಥಾನದ ನವರಂಗ ಮತ್ತು ಪ್ರಾಂಗಣವನ್ನು ಬಗೆಬಗೆಯ ಹೂವುಗಳು, ಬಾಳೆಕಂದು, ತಳಿರು ತೋರಣಗಳು ಮತ್ತು ಆಕರ್ಷಕ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು.
ವೈಭವದಿಂದ ಅಲಂಕರಿಸಿದ್ದ ಶ್ರೀ ಸಿದ್ಧೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೊದಲು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು.
ನಂತರ ಮೂರ್ತಿಯನ್ನು ಹೂವಿನ ಹಾರಗಳಿಂದ ಅಲಂಕೃತವಾದ ಚಿಕ್ಕ ರಥದಲ್ಲಿ ಪ್ರತಿಷ್ಠಾಪಿಸಿ ತೇರು ಎಳೆಯಲಾಯಿತು. ರಥವನ್ನು ಭಕ್ತರು ಎಳೆಯುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತು. ಭಕ್ತರು ಭಕ್ತಿಯ ಪರವಶತೆಯಲ್ಲಿ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ರಥೋತ್ಸವದ ನಂತರ, ಉತ್ಸವ ಮೂರ್ತಿಯನ್ನು ಮತ್ತೆ ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳ ಸಮೇತ ಮೆರವಣಿಗೆ ಮಾಡಲಾಯಿತು.
ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ನೂರಾರು ಮಹಿಳೆಯರು ಭಕ್ತಿಯ ಸಂಕೇತವಾಗಿ ನೂರೊಂದು ಹಣತೆಗಳನ್ನು ಹಚ್ಚಿ ದೀಪೋತ್ಸವ ಸೇವೆ ಸಲ್ಲಿಸಿದರು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವರಿಗೆ ಭಕ್ತಿ ಸಮರ್ಪಿಸಿ ಕಡೆ ಕಾರ್ತಿಕೋತ್ಸವದ ಪುಣ್ಯ ಸಂದರ್ಭದಲ್ಲಿ ಪಾಲ್ಗೊಂಡರು.