ಅನ್ಯಭಾಷೆಗಳ ಪ್ರಭಾವದಿಂದ ಕನ್ನಡಕ್ಕೆ ಎದುರಾಗಿದೆ ಬಿಕ್ಕಟ್ಟು

ಗೊಲ್ಲಹಳ್ಳಿಯಲ್ಲಿ ಐಮಂಗಲ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ
Sammelana
ಐಮಂಗಲ ಹೋಬಳಿಯ ಗೊಲ್ಲಹಳ್ಳಿ ಜಾಗೃತಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಚ್.ಎ. ರುದ್ರಣ್ಣ ಹರ್ತಿಕೋಟೆ ಉದ್ಘಾಟಿಸಿದರು. ಸಿದ್ದೇಶ್‌ಗೌಡ, ಡಾ. ಚಿಕ್ಕಣ್ಣ ಯಳ್ಳೆಕಟ್ಟೆ, ಪಿ. ತಿಪ್ಪೇಸ್ವಾಮಿ, ಸಿ. ರಾಮಚಂದ್ರಪ್ಪ ಇತರರು ಇದ್ದರು.Sammelana
Published on: 

ಐಮಂಗಲ: ಬಲವಂತದ ಹಿಂದಿ ಹೇರಿಕೆ ಹಾಗೂ ಇಂಗ್ಲಿಷ್ ಪ್ರಭಾವದಿಂದ ಮಾತೃ ಭಾಷೆ ಬಿಕ್ಕಟ್ಟು ಎದುರಿಸುತ್ತಿದೆ. ಕನ್ನಡ ಆಡಳಿತ ಭಾಷೆ ಎಂದು ಆದೇಶವಾಗಿ ವರ್ಷಗಳೇ ಕಳೆದರೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ಎಚ್.ಎ. ರುದ್ರಣ್ಣ ಹರ್ತಿಕೋಟೆ ಬೇಸರ ವ್ಯಕ್ತಪಡಿಸಿದರು.

ಹೋಬಳಿಯ ಗೊಲ್ಲಹಳ್ಳಿ ಜಾಗೃತಿ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಮಂಗಲ ಹೋಬಳಿ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಜಿಲ್ಲೆಗೆ ಭದ್ರೆಯ ನೀರು ಹರಿದು ಬಂದರೂ ಬಯಲುಸೀಮೆ ಎಂಬ ಹಣೆಪಟ್ಟಿ ಹೋಗದು. ಇಲ್ಲಿನ ಜನರ ಹೋರಾಟದ ಫಲವಾಗಿ ಭದ್ರೆಯ ನೀರು ಬಂದಿದೆ. ಹೋಬಳಿಯಲ್ಲಿ ಸಾಹಿತಿಗಳು, ಕಲಾವಿದರ ದೊಡ್ಡ ಗುಂಪೇ ಇದೆ. ಬಿದರಕೆರೆ ತೋಪಜ್ಜಿ, ಹರ್ತಿಕೋಟೆ ಹೆಂಜಮ್ಮನಂತಹವರು ಜಾನಪದ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಹರ್ತಿಕೋಟೆ, ವೇಣುಕಲ್ಲುಗುಡ್ಡ ಸಂಸ್ಥಾನಗಳು ಇತಿಹಾಸ ಆಸಕ್ತರಿಗೆ ಪ್ರೇರಣೆ ನೀಡುತ್ತಿವೆ. ಕವಿ ಬಬ್ಬೂರು ರಂಗ ಹಾಗೂ ಮಾಧವ ಅವರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಇಂತಹ ಸಮ್ಮೇಳನಗಳ ಮೂಲಕ ಇತಿಹಾಸ, ಜಾನಪದ, ರಂಗಭೂಮಿಗೆ ಬೆಳಕು ಚೆಲ್ಲಬೇಕಿದೆ ಎಂದರು.

2047ರ ಹೊತ್ತಿಗೆ ಶೇ. 70ರಷ್ಟು ಜನ ನಗರಗಳಲ್ಲಿ ವಾಸ ಮಾಡುತ್ತಾರೆ ಎಂದು ನಗರೀಕರಣ ವರದಿ ಹೇಳುತ್ತಿದೆ. ಇದನ್ನು ತಪ್ಪಿಸಲು ಮುಖ್ಯಮಂತ್ರಿಗಳು 5 ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಉದ್ಯಮ ಆರಂಭಿಸಿ, ಕೃಷಿಗೆ ಉತ್ತೇಜನ ನೀಡಿ ವಲಸೆ ತಡೆಯಬೇಕು. ರಾಜ್ಯದ ವಿವಿಧ ಜಿಲ್ಲೆಗಳ ತಲಾ ಆದಾಯ ಹೆಚ್ಚುವಂತೆ ಯೋಜನೆ ರೂಪಿಸಬೇಕು. ಚಿತ್ರದುರ್ಗದಲ್ಲಿ ಕಲ್ನಾರು, ಸೀಸ, ಕಬ್ಬಿಣ, ಚಿನ್ನದ ಅದಿರು ಸಿಗುತ್ತಿದ್ದು, ಅದನ್ನು ಬಳಸಿ ಉದ್ಯಮ ಆರಂಭಿಸಬೇಕು. ಸಮ್ಮೇಳನಗಳಲ್ಲಿ ಸಾಹಿತ್ಯದ ಜೊತೆಗೆ ಸ್ಥಳೀಯ ಅಭಿವೃದ್ಧಿ ಕುರಿತು ಗಂಭೀರ ಚರ್ಚೆಯಾಗಬೇಕೆಂದು ಸಲಹೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಲವಮ್ಮನಹಳ್ಳಿ ಸಿದ್ದೇಶ್‌ಗೌಡ ಮಾತನಾಡಿ, ಮನೆಗಳಲ್ಲಿ ಟಿವಿ ಬಂದ ಮೇಲೆ ಜನರು ಸೋಮಾರಿಗಳಾಗಿದ್ದಾರೆ. ಮಕ್ಕಳ ಕೈಗೆ ಮೊಬೈಲ್ ಸಿಕ್ಕು ಮುಠ್ಠಾಳರಾಗಿದ್ದಾರೆ. ಫೇಸ್‌ಬುಕ್ ಬಂದ ಮೇಲೆ ಒಬ್ಬರ ಮುಖ ಒಬ್ಬರು ನೋಡದಂತಾಗಿದೆ. ಮೊಬೈಲನ್ನು ಒಳ್ಳೆಯದಕ್ಕೆ ಬಳಸಲು ಸಾಧ್ಯವಿಲ್ಲವೆ? ತಂತ್ರಜ್ಞಾನ ಬದುಕನ್ನು ಹಾಳು ಮಾಡಲು ಬಿಡಬಾರದು. ತಂತ್ರಜ್ಞಾನ ಕನ್ನಡಕ್ಕೆ ಸವಾಲು ಅಲ್ಲ. ಅದನ್ನು ಸಮರ್ಥವಾಗಿ ಬಳಸುವ ಕನ್ನಡದ ಮನಸ್ಸುಗಳು ಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಡಾ. ದೊಡ್ಡಮಲ್ಲಯ್ಯ, ನಿವೃತ್ತ ಉಪನ್ಯಾಸಕ ಟಿ. ಶಿವಪ್ರಸಾದ್, ಹರ್ತಿಕೋಟೆ ದಯಾನಂದ್, ಇಂಜಿನಿಯರ್ ಲಕ್ಷ್ಮೀಕಾಂತ ಪೂಜಾರ್ ಮಾತನಾಡಿದರು.

ಕಸಾಪ ಹೋಬಳಿ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಸಿ. ರಾಮಚಂದ್ರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ. ಧನಂಜಯ, ಹರ್ತಿಕೋಟೆ ಮಹಾಸ್ವಾಮಿ, ಪ್ರಹ್ಲಾದ್, ನಿಜಲಿಂಗಪ್ಪ, ಎಚ್.ಆರ್. ಶಂಕರ್, ಬಿ. ಸಿದ್ದಪ್ಪ, ವೀರೇಶ್, ಪ್ರಾಚಾರ್ಯ ಉದಯ್ ಇಟಗಿ, ಉಪ ಪ್ರಾಚಾರ್ಯ ಧನರಾಜ್, ಎಂ. ರಾಮಲಿಂಗಪ್ಪ, ಗೋವಿಂದಪ್ಪ ಇದ್ದರು. ಕನ್ನಡ ಸಾಹಿತ್ಯ ಸಮ್ಮೇಶಳನ ಪ್ರಯುಕ್ತ ಕಂದಿಕೆರೆ ತಿಪ್ಪೇಸ್ವಾಮಿ ತಂಡದಿಂದ ಗೊರವರ ನೃತ್ಯ, ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನೋಡುಗರ ಗಮನ ಸೆಳೆದವು.

ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ

ಹಿರಿಯೂರು ಸೀಮೆ ಜಾನಪದ, ಸಾಹಿತ್ಯ, ರಂಗಭೂಮಿ, ಸಂಸ್ಕೃತಿ ಕಣಜವಾಗಿದೆ. ಹರ್ತಿಕೋಟೆ ಹೆಂಜಜ್ಜಿ, ಬಿದರಕೆರೆ ತೋಪಜ್ಜಿ, ಇಕ್ಕನೂರಿನ ನಿಂಗಜ್ಜ, ಚಳ್ಳಕೆರೆಯ ಸಿರಿಯಜ್ಜಿ ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ನಿಂಗಜ್ಜನ ಚಿತ್ರದೇವರ ಕಾವ್ಯ ಸಂಶೋಧನೆಗೆ 6 ಜನ ಡಾಕ್ಟರೇಟ್ ಪಡೆದಿದ್ದಾರೆ. ಸಿರಿಯಜ್ಜಿ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಣಿಕೆರೆಯ ಪುಟ್ಟಣ್ಣ ಎಂಬ ಮಾಟಗಾರನನ್ನು ಕಾಡುಗೊಲ್ಲರ ಜುಂಜಪ್ಪ ಬಲಿ ಪಡೆಯುವ ಕತೆ, ಆನೆಸಿದ್ರಿ ಗ್ರಾಮದ ಲಿಂಗೇಶ್ವರ ದೇಗುಲ ಚಿತ್ರದುರ್ಗ, ನಿಡುಗಲ್, ಹರ್ತಿಕೋಟೆ ಪಾಳೇಗಾರರ ಮೂಲ ದೇವರಾಗಿತ್ತು. ನಾಯಕನಹಟ್ಟಿ ತಿಪ್ಪೇಸ್ವಾಮಿ, ತೇರುಮಲ್ಲೇಶ್ವರ ಶೈವ ಸಂಸ್ಕೃತಿಯವರಾಗಿದ್ದರು. ರಾಮಾನುಜಾಚಾರ್ಯರ ಆಗಮನದ ನಂತರ ಈ ಭಾಗದ ಗೊಲ್ಲರು, ಕುಂಚಿಟಿಗರು, ಬೇಡರು ಶೈವಾರಾಧನೆ ಬದಲು ರಂಗನಾಥನ ಆರಾಧಕ ರಾದರು ಎಂದು ಸಾಹಿತಿ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ತಿಳಿಸಿದರು.

ಕನ್ನಡ ತಂತ್ರಜ್ಞಾನದ ಭಾಗವಾದರೆ ವಿಶ್ವ ವ್ಯಾಪಿಯಾಗುತ್ತದೆ. ಎಲ್ಲಿಯೇ ಆಗಲಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಕನ್ನಡವನ್ನು ಎಂದಿಗೂ ಮರೆಯಬಾರದು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಸ್ಥೆಯ ಸಹಕಾರ ಇರುತ್ತದೆ.
ಚಂದ್ರಶೇಖರ್ ಬೆಳಗೆರೆ ಜಾಗೃತಿ ಶಿಕ್ಷಣ ಸಂಸ್ಥೆ