ಜಾನುವಾರು ಅಡ್ಡ ನಿಲ್ಲಿಸಿ ಹೆದ್ದಾರಿ ತಡೆ: ಹೊಸದುರ್ಗದಲ್ಲಿ ರೈತರ ಬೃಹತ್ ಪ್ರತಿಭಟನೆ farmers' protest

ಭದ್ರಾ ಮೇಲ್ದಂಡೆ ಯೋಜನೆ ಅಡಿ ಕೆರೆಗಳಿಗೆ ಸಮರ್ಪಕ ನೀರು ಹಂಚಿಕೆ, ಕೆರೆ ಒತ್ತುವರಿ ತೆರವು ಹಾಗೂ ಬೆಂಬಲ ಬೆಲೆಯಡಿ ಖರೀದಿಸಿದ ರಾಗಿ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ-173 ಬಂದ್ ಮಾಡಿ ಹೊಸದುರ್ಗ ರೈತರು ತೀವ್ರ ಪ್ರತಿಭಟನೆ ನಡೆಸಿದರು. farmers' protest
 farmers' protest
ಹೊಸದುರ್ಗ ಸಮೀಪದ ಮಾವಿನಕಟ್ಟೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-173ರಲ್ಲಿ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಿದ ರೈತರು. farmers' protest
Published on: 

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅಡಿ ಕೆರೆಗಳಿಗೆ ಸಮರ್ಪಕ ನೀರು ಹಂಚಿಕೆ, ಕೆರೆ ಒತ್ತುವರಿ ತೆರವು ಹಾಗೂ ಬೆಂಬಲ ಬೆಲೆಯಡಿ ಖರೀದಿಸಿದ ರಾಗಿ ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ-173 ಬಂದ್ ಮಾಡಿ ರೈತರು ತೀವ್ರ ಪ್ರತಿಭಟನೆ ನಡೆಸಿದರು. farmers' protest

ತಾಲೂಕಿನ ಮಾವಿನಕಟ್ಟೆ ಗ್ರಾಮದ ಗೇಟ್ ಬಳಿ ಜಾನುವಾರು ಮತ್ತು ಎತ್ತಿನ ಬಂಡಿಗಳೊಂದಿಗೆ ಜಮಾಯಿಸಿದ ರೈತರು, ಹೆದ್ದಾರಿಯಲ್ಲಿ ಎತ್ತಿನ ಬಂಡಿಗಳನ್ನು ಅಡ್ಡಲಾಗಿ ನಿಲ್ಲಿಸಿ, ದನಕರುಗಳನ್ನು ರಸ್ತೆಯಲ್ಲೇ ಕಟ್ಟಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ತಾರತಮ್ಯದ ಆರೋಪ

ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವಲ್ಲಿ ಅಧಿಕಾರಿಗಳು ಎಡದಂಡೆ ಮತ್ತು ಬಲದಂಡೆ ಎಂಬ ಮಾನದಂಡ ಅನುಸರಿಸಿ ತಾರತಮ್ಯ ಎಸಗುತ್ತಿದ್ದಾರೆ. ಕಾಲುವೆಯ ಎಡದಂಡೆಯಲ್ಲಿರುವ ಕೆರೆಗಳನ್ನು ಯೋಜನೆಯಿಂದ ಕೈಬಿಡಲಾಗಿದ್ದು, ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಒತ್ತುವರಿ ತೆರವಿಗೆ ಒತ್ತಾಯ

ಜೋಡಿ ತುಂಬಿನ ಕೆರೆಯ ಜಾಗ ಹಾಗೂ ಗೋಮಾಳವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಲಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ತಾಲೂಕು ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಈ ಅನಧಿಕೃತ ಖಾತೆಗಳನ್ನು ರದ್ದುಪಡಿಸಲು ಮತ್ತು ಸಾರ್ವಜನಿಕ ಆಸ್ತಿ ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ಯಾವುದೇ ಹಿರಿಯ ಅಧಿಕಾರಿಗಳು ಭೇಟಿ ನೀಡಿಲ್ಲ. ತಕ್ಷಣವೇ ನೀರು ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸಿ ತಾಲೂಕಿಗೆ ಸಮಗ್ರ ನೀರಾವರಿ ಕಲ್ಪಿಸಬೇಕು, ಕೆರೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ರೈತರಿಗೆ ಪಾವತಿಸಬೇಕಿರುವ ಬಾಕಿ ರಾಗಿ ಹಣವನ್ನು ತಕ್ಷಣವೇ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು ಎಂದು ರೈತರು ಪಟ್ಟುಹಿಡಿದರು.

ಬಂಧನ - ಬಿಡುಗಡೆ

ಹೆದ್ದಾರಿ ತಡೆಯಿಂದಾಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಹೊಸದುರ್ಗಕ್ಕೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಸುನೀಲ್, ತಾಲೂಕು ಸಂಘದ ಅಧ್ಯಕ್ಷ ಮಾಯಪ್ಪ, ಮಹೇಶ್ವರಪ್ಪ, ತೀರ್ಥಪ್ಪ, ನಿರಂಜನ ಮೂರ್ತಿ, ಕರಿಸಿದ್ದಯ್ಯ, ಶಿವಕುಮಾರ, ಮಲ್ಲಿಕಾರ್ಜುನ, ಪ್ರಸನ್ನ ಕುಮಾರ್, ಚಿತ್ತಪ್ಪ, ಸ್ವಾಮಿ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಬಲ ಬೆಲೆ ಯೋಜನೆಯಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ ತಾಲೂಕಿನ ಸುಮಾರು 2,400 ರೈತರಿಗೆ ಇದುವರೆಗೂ ಹಣ ಸಿಕ್ಕಿಲ್ಲ. ರಾಗಿ ಖರೀದಿಸಿ 6 ತಿಂಗಳು ಕಳೆದರೂ ಬಿಲ್ ಪಾವತಿಸದೆ ಸತಾಯಿಸಲಾಗುತ್ತಿದೆ. ಬರಗಾಲದ ಹೊಡೆತಕ್ಕೆ ಸಿಲುಕಿ ತತ್ತರಿಸಿರುವ ಅನ್ನದಾತನಿಗೆ ರಾಗಿ ಹಣವೂ ಸಿಗದೆ ತೀವ್ರ ಸಂಕಷ್ಟ ಎದುರಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ನೆರವಿಗೆ ಬರುತ್ತಿಲ್ಲ.

ಪ್ರತಿಭಟನಾನಿರತ ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net