ಚಳ್ಳಕೆರೆ:plane ಆ ಮಕ್ಕಳು ಇದುವರೆಗೆ ವಿಮಾನವನ್ನು ಆಕಾಶದಲ್ಲಿ ಹಾರುವುದನ್ನು ನೋಡಿ ಸಂಭ್ರಮಿಸುತ್ತಿದ್ದರು. ಆದರೆ ಇಂದು ಅದೇ ವಿಮಾನದೊಳಗೆ ಕುಳಿತು ಮೋಡಗಳ ಮೇಲೆ ತೇಲುತ್ತಾ ದೇಶದ ರಾಜಧಾನಿ ದೆಹಲಿಗೆ ಹಾರಿದ್ದಾರೆ! ಇದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೊರ್ಲತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಂಭ್ರಮದ ಕತೆ.
ಕನಸಿನ ಪ್ರವಾಸಕ್ಕೆ ದಾನಿಗಳ ನೆರವು
ಒಬ್ಬ ವಿದ್ಯಾರ್ಥಿಯ ವಿಮಾನ ಪ್ರಯಾಣಕ್ಕೆ ಸುಮಾರು 13 ಸಾವಿರ ರೂಪಾಯಿಗಳ ಅವಶ್ಯಕತೆಯಿತ್ತು. ಪಾಲಕರಿಗೆ ಇದು ಅಸಾಧ್ಯದ ಮಾತಾಗಿತ್ತು. ಆದರೆ ಶಾಲೆಯ ಮುಖ್ಯ ಶಿಕ್ಷಕ ಎಸ್.ಸಿ. ನಿಜಲಿಂಗಪ್ಪ ಮತ್ತು ಶಾಲಾ ಸಮಿತಿಯ ಛಲ ಈ ಕನಸನ್ನು ನನಸು ಮಾಡಿದೆ.
ಶಾಸಕ ಟಿ. ರಘುಮೂರ್ತಿ ಅವರು 25 ಸಾವಿರ ರೂ. ಹಾಗೂ ಸಚಿವ ಡಿ. ಸುಧಾಕರ್ ಅವರು 10 ಸಾವಿರ ರೂ. ನೀಡಿ ಬೆನ್ನು ತಟ್ಟಿದ್ದಾರೆ. ಪಾಲಕರಿಂದ ಕೇವಲ 4 ಸಾವಿರ ರೂ. ಪಡೆದು, ಉಳಿದ ಮೊತ್ತವನ್ನು ಸ್ಥಳೀಯ ದಾನಿಗಳಿಂದ ಸಂಗ್ರಹಿಸಲಾಗಿದೆ.
ದೆಹಲಿಯಲ್ಲಿ ಆತಿಥ್ಯ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಕ್ಕಳ ವಾಸ್ತವ್ಯಕ್ಕೆ ಹಾಗೂ ಸಂಸತ್ ಭವನ ವೀಕ್ಷಣೆಗೆ ಸಂಪೂರ್ಣ ವ್ಯವಸ್ಥೆ ಮಾಡುವ ಮೂಲಕ ಮಕ್ಕಳ ಪ್ರವಾಸಕ್ಕೆ ಆನೆಬಲ ನೀಡಿದ್ದಾರೆ.
ಶಾಲೆಯ ಒಟ್ಟು 20 ವಿದ್ಯಾರ್ಥಿಗಳು (4 ರಿಂದ 7ನೇ ತರಗತಿ) ಬುಧವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.
ಮೊದಲ ದಿನವೇ ಭಾರತದ ಶಕ್ತಿ ಕೇಂದ್ರವಾದ ಸಂಸತ್ ಭವನ, ಐತಿಹಾಸಿಕ ಕೆಂಪುಕೋಟೆ ಮತ್ತು ವೀರಯೋಧರ ಸ್ಮರಣೆಯ ಇಂಡಿಯಾ ಗೇಟ್ ನೋಡಿ ಮಕ್ಕಳು ಪುಳಕಿತರಾಗಿದ್ದಾರೆ.
ಹಿಂದಿರುಗುವ ಪಯಣ
ವಿಮಾನದಲ್ಲಿ ದೆಹಲಿ ತಲುಪಿದ ಮಕ್ಕಳು, ಅಲ್ಲಿನ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ, ಶುಕ್ರವಾರ ರಾತ್ರಿ ರೈಲಿನ ಮೂಲಕ ಮರಳಿ ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಶಿಕ್ಷಕ ಎಚ್. ಕುಮಾರ್ ಹಾಗೂ ಶಾಲಾ ಸಮಿತಿ ಅಧ್ಯಕ್ಷ ದೇವರಾಜ್, ಸದಸ್ಯ ಬಿ.ಟಿ. ಶ್ರೀನಿವಾಸ್ ಮಕ್ಕಳ ಸುರಕ್ಷತೆಯ ಜವಾಬ್ದಾರಿ ಹೊತ್ತು ಜತೆಗಿದ್ದಾರೆ.
ಸರ್ಕಾರಿ ಶಾಲೆಯ ಮಕ್ಕಳಿಗೂ ವಿಮಾನಯಾನದ ಅನುಭವ ಸಿಗಬೇಕು ಎಂಬುದು ನಮ್ಮ ಆಸೆಯಾಗಿತ್ತು. ಇದಕ್ಕೆ ಕೈ ಜೋಡಿಸಿದ ದಾನಿಗಳು ಹಾಗೂ ಜನಪ್ರತಿನಿಧಿಗಳಿಗೆ ನಾವು ಚಿರಋಣಿ.