

ಕೆ. ಕೆಂಚಪ್ಪ, ಮೊಳಕಾಲ್ಮೂರು
ತಾಲೂಕಿನಲ್ಲಿ 19.500 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, 21 ಕೋಟಿ ರೂ. ಬೆಳೆ ವಿಮೆ ಪರಿಹಾರಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಕಂಪನಿ ಹಣ ಬಿಡುಗಡೆ ಮಾಡಬೇಕಿದೆ. ತಾಲೂಕಿನಲ್ಲಿ 32,500 ಹೆಕ್ಟೇರ್ ಪ್ರದೇಶ ಪೈಕಿ 20,500 ಹೆಕ್ಟೇರ್ ಮಳೆ ಯಾಶ್ರಿತ ಪ್ರದೇಶವಿದೆ. 19,500 ಹೆಕ್ಟೇರ್ ಬೆಳೆ ಹಾನಿ ಪ್ರದೇಶ ಎಂದು ಗುರುತಿಸ ಲಾಗಿದೆ. ಅದರಲ್ಲಿ 12,800 ರೈತರು ಶೇಂಗಾ ಬೆಳೆವಿಮೆ ಕಟ್ಟಿದ್ದಾರೆ. ಎಕರೆಗೆ 6,540 ರೂ. ನಂತೆ ವಿಮಾ ಪರಿಹಾರ 21 ಕೋಟಿ ರೂ. ನಿಗದಿಯಾಗಿದೆ.
ಅದೇ ರೀತಿ, ಕೆಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಳೆ ನಷ್ಟಕ್ಕೆ ತುತ್ತಾದ ಪರಿಹಾರವೂ ಬರಬೇಕಿದೆ. ಅದಕ್ಕಾಗಿ ಖುಷ್ಕಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟದ ಪ್ರಮಾಣದ ಆಧಾರದಲ್ಲಿ ಖುಷ್ಕಿ ಬೆಳೆ ಎಕರೆಗೆ 3.400 ರೂ. ಹಾಗೂ ತೋಟಗಾರಿಕೆ- 6.800 ರೂ. ನಂತೆ 25 ಕೋಟಿ ರೂ. ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ವರ್ಷದ ಬರದ ತಾಪದಲ್ಲಿ ಬಿತ್ತನೆ ಮಾಡಿದ ಬೆಳೆಗಳು ನಷ್ಟಕ್ಕೆ ತುತ್ತಾದ ಹಿನ್ನಲೆ ವಿಪತ್ತು ನಿರ್ವಹಣಾ ಮಾನದಂಡದಲ್ಲಿ ಪರಿಹಾರಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಕಷ್ಟದಲ್ಲಿರುವ ರೈತರಿಗೆ ಆಶಾದಾಯಕ ಸೂಚನೆಗಳು ಕಂಡು ಬರದ ಕಾರಣ ಕುಟುಂಬದ ನಿರ್ವಹಣೆ ಆತಂಕ ಮನೆಮಾಡಿದೆ. ವರ್ಷದ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ ಕೊರತೆ ನಡುವೆ ಸಾಲ ಮಾಡಿ ಬಿತ್ತನೆ ಮಾಡಿದ ನಂತರ ಇತ್ತ್ತ ಬೆಳೆಯೂ ಇಲ್ಲ, ಅತ್ತ ಹಾಕಿದ ಬಂಡವಾಳವೂ ಕೈಸೇರದ ಧಾವಂತದಲ್ಲಿ ರೈತರು ಕಂಗಾಲಾಗಿದ್ದಾರೆ.
ಜಾನುವಾರುಗಳ ರಕ್ಷಣೆಗೆ ಶೀಘ್ರ ಗೋಶಾಲೆ ತೆರೆದು ಮೇವು, ನೀರಿನ ವ್ಯವಸ್ಥೆ ಮಾಡಬೇಕು. ಸಾಕು ಪ್ರಾಣಿಗಳ ಮಾಲೀಕರಿಗೂ ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕು. ಬರುವ ದಿನಗಳು ತುಂಬ ಕಠಿಣವಾಗುತ್ತಿದ್ದು, ಸುಧಾರಣೆಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು. ಕುಡಿಯುವ ನೀರಿನ ಲಭ್ಯತೆ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಗೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಆದ್ಯತೆ ಕೊಡಬೇಕು ಎಂದು ರೈತ ಮುಖಂಡರಾದ ಕೆ. ಜಗಲೂರಯ್ಯ, ದೊಡ್ಡ ಪಾಲಯ್ಯ, ಪರಮೇಶ್ವರಪ್ಪ, ಗೋವಿಂದಪ್ಪ, ಸಣ್ಣಮಾರಣ್ಣ ತಾಕೀತು ಮಾಡಿದರು.
ಬರಪೀಡಿತ ತಾಲೂಕು ಎಂದು ಘೋಷಣೆ ಆಗಿ ತಿಂಗಳೂ ಕಳೆದರೂ ಒಂದು ಬಿಡಿಗಾಸು ಸಿಕ್ಕಿಲ್ಲ. ಸರ್ಕಾರಗಳು ಭರವಸೆಗಳ ಮಾತುಗಳಲ್ಲಿ ಮೂಗಿಗೆ ತುಪ್ಪ ಸವರುತ್ತಿವೆ. ಬರದ ತಾಪ ನೆತ್ತಿ ಸುಡುತ್ತಿದೆ. ಕುಟುಂಬದ ನಿರ್ವಹಣೆ, ಸಾಲ ಬಾಧೆಯಿಂದ ಇರುವ ಜಾನುವಾರಗಳು ರಕ್ಷಣೆಯೂ ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿ ಸರ್ಕಾರಕ್ಕೆ ಗೊತ್ತಿದ್ದರೂ ಕೃಷಿಕರ ಜೀವನದ ಜತೆ ಚೆಲ್ಲಾಟವಾಡುತ್ತಿದೆ.