ಚಳ್ಳಕೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕೆ ಸಂಘಗಳ ಸ್ಥಾಪನೆ ಮೂಲಕ ಒಳ್ಳೆಯ ಅವಕಾಶ ಕಲ್ಪಿಸಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. Dharmasthala
ನಗರದ ಹೊರವಲಯದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.
ಮನೆತನದ ಮಕ್ಕಳಿಗೆ ಮಹಿಳೆ ಮೊದಲ ಗುರು. ಸಮಾಜದ ತಿಳಿವಳಿಕೆ ಮತ್ತು ಬದುಕಿನ ಸಂಸ್ಕೃತಿ ತಾಯಿಯಿಂದ ಮಾತ್ರ ನಿರೀಕ್ಷೆ ಮಾಡಬಹುದು. ಗಂಡು ಮಕ್ಕಳು ಮನೆ ನಿರ್ವಹಣೆಗೆ ದುಡಿಯಬಹುದು. ಆದರೆ, ಸಂಬಂಧದ ಪ್ರೀತಿ, ವಿಶ್ವಾಸ ಪೋಷಣೆ ಹೆಣ್ಣು ಮಕ್ಕಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಹೆಣ್ಣು ಮಕ್ಕಳ ಸಾಮಾಜಿಕ ಭದ್ರತೆಯಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಪುಣ್ಯಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಾಗಿ ಭೇಟಿ ನೀಡಿದ್ದಾರೆ. ಇದರಿಂದ ಧರ್ಮಸ್ಥಳಕ್ಕೆ ನಿರೀಕ್ಷೆ ಮೀರಿ ಹುಂಡಿಗೆ ಹಣ ಸಂಗ್ರಹವಾಗಿದೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದರು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ ಮಾತನಾಡಿ, ಸಾಲ ಸೌಲಭ್ಯಕ್ಕೆ ನಿಮ್ಮ ದಾಖಲೆ ಕೊಟ್ಟು ಬೇರೆಯವರಿಗೆ ಹಣ ಕೊಡಿಸುವ ಕೆಲಸ ಮಾಡಬಾರದು. ಇದರಿಂದ ಕುಟುಂಬದಲ್ಲಿ ಭಿನ್ನತೆ ಹುಟ್ಟುತ್ತದೆ. ಇಂತಹ ಘಟನೆಗಳಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ಬನಶ್ರೀ ವೃದ್ಧಾಶ್ರಮ ಸಂಸ್ಥಾಪಕಿ ಮಂಜುಳಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ, ವಕೀಲೆ ಕೆ.ಎನ್. ಪ್ರಿಯಾ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಕೆ.ಎಂ. ಜಗದೀಶ್ ಇದ್ದರು.