ಯೋಜನೆ ಶುರುವಿಗೆ ಮುನ್ನ ಅಸಮಾಧಾನ

ಏತ ನೀರಾವರಿಯಿಂದ 21 ಹಳ್ಳಿಗಳ ಕೈ ಬಿಡಲಾಗಿದೆ ಎಂದು ರೈತರ ಆಕ್ರೋಶ
Lake
ಕಲ್ವಳ್ಳಿ ಭಾಗದ ಚಿಗಳಕಟ್ಟೆ ಕೆರೆ.Lake
Published on: 

ಬಸವರಾಜ್ ಖಂಡೇನಹಳ್ಳಿ ಹಿರಿಯೂರು

ತಾಲೂಕಿನ ಜೆ.ಜಿ. ಹಳ್ಳಿ ಹೋಬಳಿ, ಕಲ್ವಳ್ಳಿ ಭಾಗದ 17 ಕೆರೆಗಳಿಗೆ ಶಾಶ್ಚತ ನೀರಾವರಿ ಸೌಲಭ್ಯ ಕಲ್ಪಿಸುವ ಏತ ನೀರಾವರಿ ಯೋಜನೆಯಿಂದ 21 ಹಳ್ಳಿಗಳನ್ನು ಕೈ ಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜೆ.ಜಿ.ಹಳ್ಳಿ ಹೋಬಳಿಯ 17 ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ನಿರಂತರ ಧರಣಿ, ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಏತ ನೀರಾವರಿ ಯೋಜನೆಗೆ 244 ಕೋಟಿ ರೂ. ಅನುದಾನ ಮೀಸಲಿಟ್ಟು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಯೋಜನೆ ಕಾಮಗಾರಿಗೆ ಶೀಘ್ರ ಸಿಎಂ ಭೂಮಿ ಪೂಜೆ ನೆರವೇರಿಸಲಿದ್ದು, ನೀರಾವರಿ ಯೋಜನೆ ಆರಂಭಕ್ಕೂ ಮುನ್ನವೇ 21 ಹಳ್ಳಿಗಳ ಜನರು ಆಕ್ರೋಶ ವ್ಯಕ್ತಪಡಿಸಿರುವುದು ಉಪ ಚುನಾವಣೆ ಗೆಲುವಿಗೆ ನೀರಿನ ಅಸ್ತ್ರ ಪ್ರಯೋಗಿಸಿದ್ದ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂಬ ಚರ್ಚೆ ಶುರುವಾಗಿದೆ.

ಕಲ್ವಳ್ಳಿ ಭಾಗದ 21 ಗ್ರಾಮಗಳು ನೀರಾವರಿ ಯೋಜನೆಯಿಂದ ವಂಚಿತವಾಗಿವೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಾಡುಗೊಲ್ಲರು, ಹಿಂದುಳಿದ ವರ್ಗದ ಜನರು ಪಶುಪಾಲನೆ, ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ನೀರಾವರಿ ವಿಚಾರದಲ್ಲಿ ತಾಲೂಕಿನ ಜನರ ಪರಿಸ್ಥಿತಿ ಸಮುದ್ರದ ಜತೆ ನೆಂಟಸ್ತನ, ಉಪ್ಪಿಗೆ ಬರ ಎಂಬಂತಾಗಿದೆ. ವಿವಿ ಸಾಗರ ಜಲಾಶಯವಿದ್ದರೂ ಸಮಗ್ರ ನೀರಾವರಿ ಯೋಜನೆ ಅನುಷ್ಠಾನವಾಗಿಲ್ಲ ಎಂಬ ಆಕ್ರೋಶ ಜನರಲ್ಲಿದೆ.

ನಿರ್ಲಕ್ಷಿತ ಹಳ್ಳಿಗಳು

ಏತ ನೀರಾವರಿ ಯೋಜನೆ ಯಿಂದ ಕಲ್ವಳ್ಳಿ ಭಾಗದ ಹಳ್ಳಿಗಳನ್ನು ಕೈ ಬಿಟ್ಟಿರುವುದು ರೈತರಲ್ಲಿ ಆಕ್ರೋಶದ ಕಿಚ್ಚು ಹೆಚ್ಚಿಸಿದೆ. ಚಿಗಳಕಟ್ಟೆ, ಸೂರಪ್ಪನಹಟ್ಟಿ, ಸರಸ್ವತಿಹಟ್ಟಿ, ಬ್ಯಾರಮಡು, ಹಂದಿಗನಡು, ಪಿಲಾಜನಹಳ್ಳಿ, ಶೇಷಪ್ಪನಹಳ್ಳಿ ಲಂಬಾಣಿ ತಾಂಡಾ, ಶೇಷಪ್ಪನಹಳ್ಳಿ, ಬ್ಯಾಟೆಮರದಹಟ್ಟಿ, ಚಿತ್ರದೇವರಹಟ್ಟಿ, ಬುಳ್ಳಯ್ಯನಹಟ್ಟಿ, ಕರಿಯಜ್ಜನಹಟ್ಟಿ, ದ್ಯಾವರಯ್ಯನಹಟ್ಟಿ, ಬಸವನಹಟ್ಟಿ, ಕರೆಮುಂದಲಹಟ್ಟಿ, ಕೊಟ್ಟಿಗೆರಹಟ್ಟಿ, ಬಸವನಹಟ್ಟಿ, ಬಡಗೊಲ್ಲರಹಟ್ಟಿ, ಹೊಸಹಟ್ಟಿಗಳಲ್ಲಿ ಅಂತರ್ಜಲ ಪಾತಾಳ ಸೇರಿದ್ದು ಹನಿ ನೀರಿಗೂ ಪರಿತಪಿಸುವಂತಾಗಿದೆ.

ವಿಡಿಯೋ ವೈರಲ್

ತಾಲೂಕಿನಲ್ಲಿ ಉಪ ಚುನಾವಣೆ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ನೀರಿನ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಕಾಯಂ ಪರಿಹಾರ ಒದಗಿಸುವ ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್ ಅವರು ಇತ್ತೀಚೆಗೆ ಕಲ್ವಳ್ಳಿ ಭಾಗದ ಹಳ್ಳಿಗಳಿಗೆ ಭೇಟಿ ನೀಡಿದ ವೇಳೆ ಅವೈಜ್ಞಾನಿಕ ನೀರಾವರಿ ಯೋಜನೆ ರೂಪಿಸಲಾಗಿದೆ. ನೀರಾವರಿ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಚುನಾವಣೆ ಕಾರಣಕ್ಕೆ ಭರವಸೆ ನೀಡುವುದು ಬೇಡ, ಮುಂದೆ ಗೆದ್ದು ಬಂದವರು ಸಮಸ್ಯೆ ಇತ್ಯರ್ಥ ಮಾಡುತ್ತಾರೆನ್ನುವ ಯಾವ ನಂಬಿಕೆಯೂ ನಮ್ಮಲ್ಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲ್ವಳ್ಳಿ ಭಾಗದಲ್ಲಿ ವಿರೋಧದ ಆತಂಕ

ಉಪ ಚುನಾವಣೆ ಹಿನ್ನೆಲೆ ಕಲ್ವಳ್ಳಿ ಭಾಗದ ಹಳ್ಳಿಗಳಿಗೆ ಮತಯಾಚನೆಗೆ ಹೋಗುವ ರಾಜಕೀಯ ಪಕ್ಷದ ನಾಯಕರಿಗೆ ವಿರೋಧ ವ್ಯಕ್ತವಾಗುವ ಆತಂಕ ಎದುರಾಗಿದೆ. ಈ ಭಾಗದ ಪ್ರಮುಖ ಕಿಚ್ಚಲಕೆರೆ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡುವಂತೆ ಜನರು ಒತ್ತಾಯಿಸಿದ್ದು, ಇಲ್ಲಿನ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಿದರೆ ಹಿರಿಯೂರು-ಚಿತ್ರದುರ್ಗ ಗಡಿ ಭಾಗದ ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.

ಅವೈಜ್ಞಾನಿಕ ಯೋಜನೆ

ಕಲ್ವಳ್ಳಿ ಭಾಗದ 17 ಕೆರೆಗಳಿಗೆ ಕೂನಿಕೆರೆ ಗ್ರಾಮ ಸಮೀಪದ ವೇದಾವತಿ ನದಿ ಪಾತ್ರದಿಂದ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ಕೇವಲ 6 ಹಳ್ಳಿಗಳಿಗೆ ಅನುಕೂಲವಾಗಲಿದೆ. ರೈತರ ಒತ್ತಾಯಕ್ಕೆ ಮಣಿದು ತರಾತುರಿಯಲ್ಲಿ ಯೋಜನೆ ರೂಪಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ ನೀರಿನ ಪೈಪ್‌ಲೈನ್ ಅಳವಡಿಸಲು ಯೋಜನೆ ರೂಪಿಸಲಾಗಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ.

ಹಿರಿಯೂರು ತಾಲೂಕಿನ ಜೆ.ಜಿ. ಹಳ್ಳಿ-ಕಲ್ವಳ್ಳಿ ಭಾಗದ ನೀರಿನ ಸಮಸ್ಯೆ ಚುನಾವಣೆ ವೇಳೆ ಮತಬೇಟೆಗೆ ಅಸ್ತ್ರವಾಗುತ್ತಲೇ ಇದೆ. ಏತ ನೀರಾವರಿ ಯೋಜನೆಯಿಂದ 21 ಹಳ್ಳಿಗಳನ್ನು ಕೈ ಬಿಟ್ಟಿರುವುದು ದುರಂತ. ಮೂಲ ಕಲ್ವಳ್ಳಿ ಭಾಗಕ್ಕೆ ನ್ಯಾಯ ಒದಗಿಸಬೇಕು, ನಿರ್ಲಕ್ಷ್ಯ ಮಾಡಿದರೆ ಉಪ ಚುನಾವಣೆ ಬಹಿಷ್ಕಾರ ಮಾಡುವ ಕುರಿತು 21 ಹಳ್ಳಿಗಳ ಜನರು ನಿರ್ಧಾರ ಕೈಗೊಳ್ಳಲಿದ್ದಾರೆ.
ಸಿ.ಎಸ್. ಮಣಿಕಂಠ, ಯುವ ರೈತ, ಚಿಗಳಿಕಟ್ಟೆ
ನೀರಾವರಿ ಯೋಜನೆ ಗಳು ರೈತರಿಗೆ ವರದಾನ ವಾಗಬೇಕು. ಕಲ್ವಳ್ಳಿ ಭಾಗಕ್ಕೆ ಸಮಗ್ರ ನೀರಾವರಿ ಯೋಜನೆ ರೂಪಿಸಿದರೆ ಮಾತ್ರ ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಭಾರತೀಯ ಕಿಸಾನ್ ಸಂಘ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net