

ಚಳ್ಳಕೆರೆ: ಆಶ್ರಮಕ್ಕೆ ಬರುವ ಭಕ್ತರು ಹಸಿದು ಮರಳಬಾರದು ಎನ್ನುವ ದೃಷ್ಟಿಯಿಂದ ಶ್ರೀ ನಾಗ ಸಿಂಹಾದ್ರಿ ಸ್ವಾಮೀಜಿ ಅವರ ಪರಂಪರೆ ರಕ್ಷಣೆಗೆ ಮಾತೃಶ್ರೀ ಭೋಜನಾಲಯವನ್ನು ನಿರ್ಮಿಸಲಾಗಿದೆ ಎಂದು ಶ್ರೀ ನರಹರಿ ಸೇವಾ ಪ್ರತಿಷ್ಠಾನ ಪೀಠಾಧ್ಯಕ್ಷ ಡಾ. ವೈ. ರಾಜಾರಾಂ ಸ್ವಾಮೀಜಿ ತಿಳಿಸಿದರು. Dining hall constructed
ನಗರ ಹೊರವಲಯದ ಶ್ರೀ ನರಹರೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಮಾತೃಶ್ರೀ ಭೋಜನಾಲಯವನ್ನು ಲೋಕಾರ್ಪಣೆಗೊಳಿಸಿ, ಆ ಬಳಿಕ ಹಮ್ಮಿಕೊಂಡಿದ್ದ ಗೋಪೂಜೆ, ಗೃಹಪ್ರವೇಶ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವ ಜೀವನ ಸಾರ್ಥಕವಾಗಬೇಕಾದರೆ ಆಧ್ಯಾತ್ಮಿಕ ಅರಿವು ಅಗತ್ಯ. ಬದುಕಿನಲ್ಲಿ ಯಾವುದು ನಶ್ವರ ಎಂಬುದನ್ನು ಅರಿತು ಸಾಗಲು ಗುರುವಿನ ಅನುಗ್ರಹವನ್ನು ಸಂಪಾದಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಾರದಾ ಆಶ್ರಮದ ಮಾತಾಜಿ ತ್ಯಾಗಮಯಿ ಮಾತನಾಡಿ, ತನ್ನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮನುಷ್ಯ ಇಡೀ ಜಗತ್ತನ್ನೇ ಗೆಲ್ಲಬಲ್ಲ. ದೇಹ, ಪ್ರಾಣ ಮತ್ತು ಮನಸ್ಸಿನ ನಡುವೆ ನಮ್ಮತನವನ್ನು ಕಂಡುಕೊಳ್ಳಲು ಲೋಕದ ಅರಿವು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಶಾಂತಾರಾಂ ಸ್ವಾಮೀಜಿ ವಹಿಸಿದ್ದರು. ಸಾಯಿ ಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ, ವಿಜಯಲಕ್ಷ್ಮಿ, ರಾಜೇಶ್ವರಿ, ಸುಬ್ರಹ್ಮಣ್ಯ ಸ್ವಾಮಿ, ಏಕಾಂತರಾಂ ಸ್ವಾಮಿ, ದೇವರಾಜ್ ರೆಡ್ಡಿ, ದಿನೇಶ್ ರೆಡ್ಡಿ, ಜಯರಾಂ, ರಂಗನಾಥ, ಸಿದ್ದಾಪುರ ಯತೀಶ್ ಮುಂತಾದವರು ಉಪಸ್ಥಿತರಿದ್ದರು.
ಪರಮಾತ್ಮ ಇದ್ದಾನೆ ಮತ್ತು ಇಲ್ಲ ಎನ್ನುವ ಎರಡು ವರ್ಗದ ಜನರನ್ನು ಲೋಕದಲ್ಲಿ ಕಾಣುತ್ತೇವೆ. ಈ ನಡುವೆ ಸತ್ಯದ ದಾರಿ ಕಂಡುಕೊಳ್ಳಲು ದೇಹ, ಮನಸ್ಸು ಮತ್ತು ಆಸೆಗಳ ವ್ಯಾಮೋಹವನ್ನು ತ್ಯಜಿಸಬೇಕು.
ಸದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ