

ಚಿತ್ರದುರ್ಗ: ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ(ಎಐಯುಟಿಯುಸಿ ಸಂಯೋಜಿತ) ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಬಿಸಿಎಂ ಹಾಸ್ಟೆಲ್ ನೌಕರರು ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಜಿಪಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ವೇತನ ಸಂಹಿತೆ ೨೦೧೯ರ ಚೌಕಟ್ಟಿನಡಿ ಎಲ್ಲ ನಿಗದಿತ ಉದ್ಯೋಗಿಗಳಿಗೂ ಅನ್ವಯವಾಗುವಂತೆ ಏಕರೂಪದ ಕೌಶಲಾಧಾರಿತ ವೇತನ ಶ್ರೇಣಿಯನ್ನು ಕಳೆದ ಮೇ ೨೨ರಿಂದಲೇ ಜಾರಿಗೊಳಿಸಿ ಸರ್ಕಾರ ಅಽಸೂಚನೆ ಹೊರಡಿಸಿದೆ.
ಬಿಸಿಎಂ ಇಲಾಖೆ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು, ಅಡುಗೆಯವರು, ಅಡುಗೆ ಸಹಾಯಕರು ಹಾಗೂ ಕಾವಲುಗಾರರಿಗೆ ದಿನದ ಮೂಲ ವೇತನ, ಮಾಸಿಕ ಮೂಲ ವೇತನ ತುಟ್ಟಿಭತ್ಯೆ ಸಹಿತ ಒಟ್ಟು ಹೊಸ ಮಾಸಿಕ ವೇತನ ಮೊತ್ತ ಪಾವತಿಗೆ ಸರ್ಕಾರ ಆದೇಶಿಸಿದೆ.
ಪಿಎಫ್, ಇಎಸ್ಐ, ಒಟಿ, ಗ್ರಾಚ್ಯುಟಿ ಸೇರಿ ಇನ್ನಿತರ ಕಾನೂನುಬದ್ಧ ಸೌಲಭ್ಯಗಳನ್ನು ಪರಿಷ್ಕೃತ ವೇತನ ಆಧರಿಸಿ ಪಾವತಿ ಆಗಬೇಕಿದೆ. ಆದರೆ, ಸರ್ಕಾರದ ಆದೇಶದಂತೆ ಹೊಸ ಪರಿಷ್ಕೃತ ವೇತನ, ಸಂಬಳ, ಭತ್ಯೆ ಮತ್ತಿತರ ಸವಲತ್ತುಗಳು ದೊರೆಯುತ್ತಿಲ್ಲವೆಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಅಽಸೂಚನೆಯಂತೆ ಪರಿಷ್ಕೃತ ವೇತನ ಪಾವತಿಗೆ ಆಗ್ರಹಿಸಿ ನೌಕರರು ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎನ್. ಮಹೇಶ್, ಪ್ರಧಾನ ಕಾರ್ಯದರ್ಶಿ ಬಿ. ರಘು, ಆರ್. ತಿಮ್ಮೇಶಿ, ಬಿ.ಆರ್. ಸುನೀಲ್, ಕೆ. ವೀರೇಶ್, ಸಿ. ಗುರುಸ್ವಾಮಿ, ಎಸ್. ಮಂಜಣ್ಣ, ಟಿ.ಪಿ. ಷಣ್ಮುಖ ಮತ್ತಿತರ ಸಂಘದ ಹಾಗೂ ಎಐಯುಟಿಯುಸಿ ಪ್ರಮುಖರಾದ ಮಂಜುನಾಥ್ ಕೈದಾಳೆ, ತಿಪ್ಪೇಸ್ವಾಮಿ ಪ್ರತಿಭಟನೆಯಲ್ಲಿ ಇದ್ದರು.