ಕೊಂಡ್ಲಹಳ್ಳಿಯಲ್ಲಿ ಪ್ರಥಮದರ್ಜೆ ಕಾಲೇಜಿಗೆ ಬೇಡಿಕೆ

ಬಿಇಡಿ ಕಾಲೇಜು ಇದ್ದರೂ ದೊರೆಯದ ಪದವಿ ಶಿಕ್ಷಣ
College
ಮೊಳಕಾಲ್ಮುರು ತಾಲ್ಲೂಕು ಕೊಂಡ್ಲಹಳ್ಳಿ ಗ್ರಾಮ.College
Published on: 

ಕೆ. ಕೆಂಚಪ್ಪ ಮೊಳಕಾಲ್ಮೂರು

ತಾಲೂಕಿನ ಹೋಬಳಿ ಕೇಂದ್ರ ಕೊಂಡ್ಲಹಳ್ಳಿಯಲ್ಲಿ ವಿವಿಧ ಕೋರ್ಸ್​ಗಳ ಪ್ರಥಮ ದರ್ಜೆ ಕಾಲೇಜು ಆರಂಭಿಸಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಕೊಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಶಾಲಾ ಕಾಲೇಜುಗಳಿವೆ. ಬಿಇಡಿ ಕಾಲೇಜು ಕೂಡ ಇದೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಲು ಎಲ್ಲ ರೀತಿ ಅರ್ಹತೆ ಹೊಂದಿದೆ.

ಗ್ರಾಮಕ್ಕೆ ಪ್ರಥಮ ದರ್ಜೆ ಕಾಲೇಜು ಮಂಜೂರಾದರೆ ಐದಾರು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಈ ಬಗ್ಗೆ ಹಲವು ವರ್ಷ ಗಳಿಂದಲೂ ಸರ್ಕಾರ ಮತ್ತು ಕಾಲೇಜು ಶಿಕ್ಷಣ ಮಂಡಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮೊಳಕಾಲ್ಮೂರಿಂದ 20 ಕಿ.ಮೀ., ಚಳ್ಳಕೆರೆ ಯಿಂದ 30 ಕಿ.ಮೀ. ಅಂತರದಲ್ಲಿರುವ ಕೊಂಡ್ಲಹಳ್ಳಿ ವ್ಯಾಪಾರ, ವಹಿವಾಟಿನ ಸ್ಥಳವಾಗಿಯೂ ಗುರುತಿಸಿ ಕೊಂಡಿದೆ. ಕೋನಸಾಗರ, ಬಿ.ಜಿ.ಕೆರೆ, ಹಿರೇಹಳ್ಳಿ, ಬೇಡರಡ್ಡಿಹಳ್ಳಿ, ಗೌರಸಮುದ್ರ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿವಿಧ ಕೋರ್ಸ್​ಗಳ ಪದವಿ ಶಿಕ್ಷಣ ಇಲ್ಲಿ ಲಭ್ಯವಾದರೆ ಬಡ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ. ಹೆಣ್ಣು ಮಕ್ಕಳ ಶೈಣಿಕ ಸಬಲೀಕರಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಉಚಿತ ಶಿಕ್ಷಣದ ಸೌಲಭ್ಯ ಕಲ್ಪಿಸಿವೆ. ಆದರೆ, ಇಲ್ಲಿ ಪ್ರಥಮದರ್ಜೆ ಕಾಲೇಜು ಇಲ್ಲ. ಪದವಿ ಕಾಲೇಜು ಹಾಗೂ ಪ್ರತ್ಯೇಕ ವಸತಿ ನಿಲಯ ಆರಂಭಿಸಿದರೆ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ದಾರಿಯಾಗಲಿದೆ ಎನ್ನುತ್ತಾರೆ ಸ್ಥಳಿಯರು.

ಪಿಯು ಶಿಣದ ಬಳಿಕ ಈ ಭಾಗದ ವಿದ್ಯಾರ್ಥಿಗಳು ದೂರದ ಮೊಳಕಾಲ್ಮೂರು ಅಥವಾ ಚಳ್ಳಕೆರೆಗೆ ಪದವಿ ಕಾಲೇಜುಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ನಮ್ಮೂರಲ್ಲೇ ಕಾಲೇಜು ಶಿಕ್ಷಣ ಲಭ್ಯವಾದರೆ ವಿಶೇಷವಾಗಿ ಹೆಣ್ಣು ಮಕ್ಕಳು ಶೈಣಿಕ ಸಬಲೀಕರಣ ಹೊಂದಲು ಸಾಧ್ಯವಾಗಲಿದೆ. ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಶ್ರೀರಾಮರಡ್ಡಿ ಕೊಂಡ್ಲಹಳ್ಳಿ
ಗ್ರಾಮೀಣ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೊಂಡ್ಲಹಳ್ಳಿಗೆ ಪ್ರಥಮ ದರ್ಜೆ ಕಾಲೇಜು ಮಂಜೂರಾದರೆ ಅನುಕೂಲ. ಈ ಬಗ್ಗೆ ಕಾಲೇಜು ಶಿಕ್ಷಣ ಮಂಡಳಿಗೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ 11 ಪ್ರಥಮ ದರ್ಜೆ ಕಾಲೇಜುಗಳನ್ನು ಹಲವು ಕಾರಣಗಳಿಂದ ಸ್ಥಳಾಂತರಿಸುವ ಚಿಂತನೆ ಸರ್ಕಾರದ್ದಾಗಿದೆ. ನಮ್ಮ ಗ್ರಾಮಕ್ಕೆ ಆದ್ಯತೆ ಕೊಟ್ಟರೆ ಅನುಕೂಲ.
ಟಿ. ರೇವಣ್ಣ ಕೊಂಡ್ಲಹಳ್ಳಿ