ರೈತರಿಗೆ ಮಧ್ಯಂತರ ಬೆಳೆ ವಿಮೆಯಲ್ಲಿ ವಿಳಂಬ

ಚಳ್ಳಕೆರೆ ತಾಲೂಕಿನ ಕಸಬಾ ಹೋಬಳಿ ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿ ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿದರು.
ಚಳ್ಳಕೆರೆ ತಾಲೂಕಿನ ಕಸಬಾ ಹೋಬಳಿ ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿ ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
  • ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಸುಮಾರು ನಾಲ್ಕು ವಾರ ಮಳೆ ಬಂದಿಲ್ಲ
  • ಮಧ್ಯಂತರ ಬೆಳೆ ವಿಮೆ ಕೊಡಲು ವಿಮಾ ಸಂಸ್ಥೆಗಳ ಮಾರ್ಗಸೂಚಿ
ಚಳ್ಳಕೆರೆ: ಮಳೆ ಕೊರತೆಯಿಂದ ಶೇಂಗಾ, ತೊಗರಿ ಬೆಳೆ ಗೆ ಮಧ್ಯಂತರ ಬೆಳೆ ವಿಮೆ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಶನಿವಾರ ಚಳ್ಳಕೆರೆ ಕಸಬಾ ಹೋಬಳಿ ತೊಗರಿ ಬೆಳೆಗಾರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಸಿ.ಶಿವಲಿಂಗಪ್ಪ, ಮುಂಗಾರು ಮಳೆಯಾಶ್ರಿತ ಶೇಂಗಾ, ತೊಗರಿ ಬೆಳೆಗಳಿಗೆ ಮಳೆ ತೀವ್ರ ತೊಂದರೆ ತಂದಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಸುಮಾರು ನಾಲ್ಕು ವಾರ ಮಳೆ ಬಂದಿಲ್ಲ. ಇದರಿಂದ ಸಂಪೂರ್ಣ ಬೆಳೆ ನಷ್ಟವಾಗಿದೆ ಎಂದರು.
ಈಗಾಗಲೇ ಬೆಳೆ ಸಮೀಕ್ಷೆಯೂ ನಡೆಸಲಾಗುತ್ತಿದೆ. ಮಧ್ಯಂತರ ಬೆಳೆ ವಿಮೆ ಕೊಡಲು ವಿಮಾ ಸಂಸ್ಥೆಗಳ ಮಾರ್ಗಸೂಚಿಯೂ ಇದೆ. ಅಧಿಕಾರಿಗಳು ಕೂಡಲೇ ಶೇ.25 ರಷ್ಟು ವಿಮೆ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ ಎಂದರು.
ಹಲವು ಬಾರಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಬೆಳೆ ಕಳೆದುಕೊಂಡಿರುವ ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಂಘದ ಆರ್.ಎ.ದಯಾನಂದಮೂರ್ತಿ, ವಿ.ಎಸ್.ಸಿದ್ದೇಶ್ವರ ರೆಡ್ಡಿ, ಎಸ್.ಚಂದ್ರಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net