ಸಕಾಲಕ್ಕೆ ಸಿಗದ ಬೆಳೆ ವಿಮೆ, ಪರಿಹಾರ

ಬರಗಾಲ ಘೋಷಣೆಯಾದರೂ ಬಾರದ ಅನುದಾನ, ಗುಳೆ ಹೊರಟ ರೈತ, ಕಾರ್ಮಿಕರು
Drought
ಚಳ್ಳಕೆರೆ ತಾಲೂಕಿನ ಬೂದಿಹಳ್ಳಿ ರೈತರೊಬ್ಬರ ಹೊಲದಲ್ಲಿ ಶೇಂಗಾ ಬೆಳೆ ಒಣಗುತ್ತಿರುವದು.Drought
Published on: 

ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ

ಸದಾಕಾಲ ಸಮಸ್ಯೆಗಳ ಸುಳಿಯಲ್ಲೇ ಗುರುತಿಸಿಕೊಂಡ ಚಳ್ಳಕೆರೆ ತಾಲೂಕು ಈ ಬಾರಿಯೂ ಸಮಸ್ಯೆಗಳಲ್ಲಿ ಮೊದಲ ಸ್ಥಾನ ಉಳಿಸಿಕೊಂಡಂತಿದೆ.

ಇತ್ತ ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಅತ್ತ ಬೆಳೆ ಪರಿಹಾರವೂ ಬಂದಿಲ್ಲ, ಬೆಳೆ ವಿಮೆಯೂ ಕಂಡಿಲ್ಲ! ಕೊನೆಗೆ, ಸರ್ಕಾರ ಬರಪೀಡಿತವೆಂದು ೋಷಣೆ ಮಾಡಿದ್ದು ಅದರಿಂದಲೂ ಈವರೆಗೆ ಯಾವುದೇ ಅನುಕೂಲ ಕಂಡಿಲ್ಲ! ಪರಿಣಾಮ, ತಾಲೂಕಿನಲ್ಲಿ ಸಣ್ಣ ಹಿಡುವಳಿ ರೈತರು, ಕೂಲಿ ಕಾರ್ಮಿಕರು ದಿನದ ದುಡಿಮೆಗಾಗಿ ಪಟ್ಟಣಕ್ಕೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಮತ್ತು ಕೂಲಿ ಕಾರ್ಮಿಕರ ನೆರವಿಗೆ ಬರಬೇಕಾದ ಸರ್ಕಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಸಕಾಲಕ್ಕೆ ಬೆಳೆ ವಿಮೆ, ಬೆಳೆ ಪರಿಹಾರವೂ ಬಿಡುಗಡೆ ವಾಡುತ್ತಿಲ್ಲ.

ವಾಡಿಕೆ ಮುಂಗಾರು ಮಳೆ ಬಂದಿಲ್ಲ. ಮಳೆಯಾಶ್ರಿತ ಶೇಂಗಾ, ತೊಗರಿ, ಸಿರಿ ಧಾನ್ಯ ಬೆಳೆಗಳ ಬಿತ್ತನೆಯಲ್ಲಿ ವ್ಯತ್ಯಾಸವಾಗಿದೆ. ಅಲ್ಪಸ್ವಲ್ಪ ಬಿತ್ತನೆ ವಾಡಿರುವ ಬೆಳೆ ಸಂಪೂರ್ಣ ಒಣಗಿ ಹೋಗಿದ್ದು, ಕೆಲ ರೈತರು ಕುರಿ, ಮೇಕೆ, ಜಾನುವಾರುಗಳ ಬಿಟ್ಟು ಬೆಳೆ ಮೇಯಿಸುತ್ತಿದ್ದಾರೆ. ಮಳೆಗಾಲದಲ್ಲೂ ಬೇಸಿಗೆ ರೀತಿಯ ತಾಪವಾನ ಇದೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದೊದಗಿದೆ.

ವಿಮೆಯಿಂದ ಬಿಡಿಗಾಸೂ ಬಂದಿಲ್ಲ!

ಬರಪೀಡಿತ ೋಷಣೆಯಾದ ತಾಲೂಕಿನಲ್ಲಿ ಬೆಳೆ ವಿಮೆ 6.600 ರೂ. ಸರ್ಕಾರ ನಿಗದಿಸಿದೆ. ಹಾಗಾಗಿ, ತಾಲೂಕಿನಲ್ಲಿ ಬರೋ ಬ್ಬರಿ 59,790 ಜನ ರೈತರು ಶೇಂಗಾ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆ ಮಾಡಿಸಿ ದ್ದಾರೆ. ಆದರೆ, ಮಳೆ ಬಾರದೆ ಬೆಳೆ ಒಣಗಿದ್ದರೂ ಈವರೆಗೆ ಯಾರೊಬ್ಬರಿಗೂ ಬಿಡಿಗಾಸು ಬಂದಿಲ್ಲ. ಬರಪೀಡಿತ ತಾಲೂಕಿನ ಪ್ರತಿ ರೈತರ ಬ್ಯಾಂಕ್ ಖಾತೆಗೆ ತಾತ್ಕಾಲಿಕವಾಗಿ 2500 ರೂ. ಹಾಕುವುದಾಗಿ ಘೋಷಿಸಿರುವ ಸರ್ಕಾರ ಮರೆತಿದೆ. ಹೆಸರಿಗಷ್ಟೇ ರಾಜ್ಯದ 217 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ವಾಡಿರುವ ಸರ್ಕಾರ ಮುಂದಿನ ಪರಿಹಾರದ ಕ್ರಮದ ಬಗ್ಗೆ ಜಾಣಕುರುಡುತನ ಮೆರೆಯುತ್ತಿದೆ.

ಬೆಳೆ ವಿಮೆ ನೀಡಲು ಪತ್ರ

ಚಿತ್ರದುರ್ಗ ಜಿಲ್ಲೆಯ ಆರು ತಾಲೂಕಿನಲ್ಲಿ ಬರಗಾಲ ಪರಿಸ್ಥಿತಿ ತೀವ್ರವಾಗಿದೆ. ಅಧಿಕ ಉಷ್ಣಾಂಶ ದೀರ್ಘಕಾಲದ ತೇವಾಂಶ ಕೊರತೆಯಿಂದ ಶೇಂಗಾ, ತೊಗರಿ, ಮುಸುಕಿನ ಜೋಳ,ರಾಗಿ, ನವಣೆ, ಸಜ್ಜೆ ಬೆಳೆಗಳ ಋತುವಿನ ಮಧ್ಯದಲ್ಲಿ ಎದುರಾಗುವ ಸಂಕಷ್ಟದ ಕುರಿತು ಜಿಲ್ಲೆಯ ಬೆಳೆ ವಿಮಾ ಸಮಿತಿಯ ವರದಿ ಅನ್ವಯದಂತೆ ಸೂಕ್ತ ಕ್ರಮ ಕೈಗೊಂಡು, ವಿಳಂಬವಿಲ್ಲದೆ ಋತು ಮಧ್ಯೆ ಪ್ರತಿಕೂಲತೆಯ ಮಧ್ಯಂತರ ಪರಿಹಾರದ ಬೆಳೆ ವಿಮೆ ಸೌಲಭ್ಯ ಮತ್ತು ಬಿತ್ತನೆ ಪೂರ್ವ ಯೋಜನೆಯ ಶೇ.25ರಷ್ಟು ಬೆಳೆ ವಿಮಾ ಮೊತ್ತವನ್ನು ಸಕಾಲಕ್ಕೆ ಬಿಡುಗಡೆ ಮಾಡುವಂತೆ ಕೃಷಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.

ಬಿತ್ತನೆ ಕುಂಠಿತ

90 ಸಾವಿರ ಹೆಕ್ಟೇರ್ ಶೇಂಗಾ ಜತೆಗೆ ಇತರೆ ಬೆಳೆಗಳೂ ಸೇರಿ 1.20 ಸಾವಿರ ಹೆಕ್ಟೇರ್ ಬಿತ್ತನೆ ಆಗುತ್ತಿದ್ದ ತಾಲೂಕಿನಲ್ಲಿ ಪ್ರಸ್ತಕ ವರ್ಷ ಮಳೆ ಕೊರತೆಯಿಂದ ಕೇವಲ 46,670 ಹೆಕ್ಟೇರ್ ಬಿತ್ತನೆ ವಾಡಲಾಗಿದೆ. ಬೆಳೆ ನಷ್ಟವಾಗಿ ರೈತರು ಸಾಲಗಾರರಾಗಿದ್ದಾರೆ. ಇದುವರೆಗೂ ಆಕಾಶದ ಕಡೆ ಮುಖ ವಾಡಿದ್ದ ರೈತ, ಮಳೆ ಆಸೆ ತೊರೆದು ಈಗ ಬೆಳೆ ವಿಮೆ ಮತ್ತು ಬೆಳೆ ಪರಿಹಾರಕ್ಕೆ ಸರ್ಕಾರದ ಕಡೆ ಮುಖ ವಾಡಿದ್ದಾನೆ.

ಪಿಂಚಣಿ ಬರುತ್ತಿಲ್ಲ

ಸಹಜವಾಗಿ ಬರುತ್ತಿದ್ದ ಸಾವಾಜಿಕ ಪಿಂಚಣಿ ಐದಾರು ತಿಂಗಳಿಂದ ಸಿಗುತ್ತಿಲ್ಲ. ಇದರಿಂದ ತಾಲೂಕಿನ ಅಂಗವಿಕಲರು, ವಯೋವೃದ್ಧರು, ವಿಧವೆಯರ ಜೀವನ ಕಷ್ಟವಾಗಿದೆ. ಪ್ರಾಕೃತಿಕ ಬರಗಾಲದ ಜತೆಗೆ, ಸರ್ಕಾರದ ನಿರ್ಲಕ್ಷ್ಯದಿಂದ ಜನರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದ್ದು, ಪಟ್ಟಣಗಳಿಗೆ ಗುಳೆ ಹೋಗುವ ಸ್ಥಿತಿ ಬಂದಿದೆ.

ತಾಲೂಕಿನಲ್ಲಿ ಒಟ್ಟು 59,790 ಜನ ರೈತರು ವಿವಿಧ ಬೆಳೆಗಳಿಗೆ ವಿಮೆ ಪಾವತಿಸಿದ್ದಾರೆ. ಆದರೆ, ಈವರೆಗೆ ವಿಮೆಹಣ ಬಿಡುಗಡೆಯಾಗಿಲ್ಲ. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.
ಡಾ.ಎಸ್.ಟಿ.ರಮೇಶ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ.
ಎನ್‌ಡಿಆರ್‌ಎಫ್ ವಾರ್ಗ ಸೂಚಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಬೆಳೆ ಕಳೆದುಕೊಂಡಿರುವ ರೈತರ ಪ್ರತಿ ಎಕರೆಗೆ 20 ಸಾವಿರ ರೂ. ಬಿಡುಗಡೆ ವಾಡಬೇಕು. ತುರ್ತಾಗಿ ಗ್ರಾಪಂ ಹಂತದಲ್ಲಿ ಗೋ ಶಾಲೆಗಳನ್ನು ತೆರೆಯಬೇಕು. ವಿವಾ ಕಂತು ಕಟ್ಟಿರುವ ಪ್ರತಿ ರೈತರಿಗೂ ತಕ್ಷಣವೇ ವಿಮೆ ಬಿಡುಗಡೆ ಮಾಡಬೇಕು.
ಕೆ. ಚಿಕ್ಕಣ್ಣ, ಕಾರ್ಯಾಧ್ಯಕ್ಷ, ಅಖಂಡ ಕರ್ನಾಟಕ ರೈತ ಸಂಘ, ಚಳ್ಳಕೆರೆ
ತಾಲೂಕಿನ 8832 ತೊಗರಿ ವಿಮೆದಾರರ ಬೆಳೆಯೂ ಸೇರಿ ಜಿಲ್ಲೆಯ ಮಳೆಯಾಶ್ರಿತ ಎಲ್ಲ ಬೆಳೆಗಳು ಪೂರ್ಣ ಹಾನಿಯಾಗಿರುವ ಪರಿಸ್ಥಿತಿ ಇದೆ. ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯಂತೆ ಋತು ಮಧ್ಯೆ ಪ್ರತಿಕೂಲತೆಯ ಮಧ್ಯಂತರ ಪರಿಹಾರ ವಿತರಣೆಗೆ ಸರ್ಕಾರ ಕ್ರಮ ವಹಿಸಬೇಕು.
ಡಾ.ಸಿ.ಶಿವಲಿಂಗಪ್ಪ, ಅಧ್ಯಕ್ಷರು, ತೊಗರಿ ಬೆಳೆಗಾರರ ಸಂಘ, ಚಳ್ಳಕೆರೆ.
ಎಲ್ಲೆಡೆ ಭೀಕರ ಬರಗಾಲ ಆವರಿಸಿದ್ದು, ಸರ್ಕಾರ ಗ್ಯಾರಂಟಿ ಯೋಜನೆಗಳನ್ನಾದರೂ ನಿಲ್ಲಿಸಿ, ರೈತರ ನೆರವಿಗೆ ಧಾವಿಸಲಿ. ಜನರಿಂದ ತೆರಿಗೆ ಸಂಗ್ರಹ ವಾಡಿಕೊಳ್ಳುವ ಸರ್ಕಾರ ರೈತರು, ಕೂಲಿ ಕಾರ್ಮಿಕರ ವಿರೋಧಿಯಾಗಿ ಆಡಳಿತ ಮಾಡುತ್ತಿದೆ. ಗ್ಯಾರಂಟಿ ಕೈಬಿಟ್ಟು ರೈತರ ಕೈಹಿಡಿಯಿರಿ.
ರೆಡ್ಡಿಹಳ್ಳಿ ವೀರಣ್ಣ ಉಪಾಧ್ಯಕ್ಷರು, ರಾಜ್ಯ ರೈತ ಸಂಘ, ಚಳ್ಳಕೆರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net