

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 24ರಂದು ಗೋನೂರು ಕೆರೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಗಾಪೂಜೆ ನೆರವೇರಿಸಲಿದ್ದಾರೆ. ಇದೇ ವೇಳೆ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಅಡೆತಡೆಗಳ ನಡುವೆಯೂ ಸಿಎಂ ಡಿ.ಕೆ. ಶಿವಕುಮಾರ್ ಅವರ ಇಚ್ಛಾಶಕ್ತಿಯ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯ ಕೆರೆಗಳಿಗೆ ನೀರು ಬಂದಿದೆ. ಈ ಮೂಲಕ ಜಿಲ್ಲೆಯ ಜನರ ದಶಕಗಳ ಕನಸು ನನಸಾಗಿದೆ ಎಂದರು.
ಸಿಎಂ ಗೋನೂರು ಕೆರೆಯಲ್ಲಿ ಭದ್ರಾ ನೀರಿಗೆ ಗಂಗಾಪೂಜೆ ನೆರವೇರಿಸಲಿದ್ದಾರೆ. ಈ ಒಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ನೀರು ಕೊಟ್ಟವರಿಗೆ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತುಂಗಾ ಜಲಾಶಯದಿಂದ ನೀರು ಭದ್ರಾಕ್ಕೆ ಹರಿದಿಲ್ಲ. ಆದರೂ ಜಿಲ್ಲೆಯ ಜನರ ಅನುಕೂಲಕ್ಕಾಗಿ ವಿರೋಧದ ನಡುವೆಯೂ ನೀರು ಹರಿಸಲಾಗಿದೆ. ಮುಂದಿನ 4 ತಿಂಗಳಲ್ಲಿ ತುಂಗಾ ನೀರನ್ನು ಹರಿಸಲು ಕ್ರಮ ವಹಿಸಲಾಗಿದೆ. ಎಲ್ಲರಿಗೂ ನೀರು ಕೊಡಲಾಗುವುದು, ಅನಗತ್ಯ ಗೊಂದಲ ಬೇಡ. ಪ್ರಸ್ತುತ 0.6 ಟಿಎಂಸಿ ನೀರು ಮಾತ್ರ ಹರಿದಿದ್ದು, ಇನ್ನೂ 2.4 ಟಿಎಂಸಿ ನೀರು ಬರಲಿದೆ ಎಂದು ತಿಳಿಸಿದರು.
ತುಮಕೂರು ಶಾಖಾ ನಾಲೆ ಮೂಲಕ ಶ್ರೀರಾಂಪುರ ಹಾಗೂ ಹೋಬಳಿಗೆ ನೀರು ಹರಿಸುವ ಹೊಣೆ ನನ್ನ ಮೇಲಿದೆ. ಯೋಜನೆಯಿಂದ ಹೊರಗುಳಿದ ಮತ್ತೋಡು ಹೋಬಳಿಯ 24 ಕೆರೆಗಳಿಗೆ ಕಾರೇಹಳ್ಳಿ ಬ್ಯಾರೇಜ್‌ನಿಂದ ಏತ ನೀರಾವರಿ ಮೂಲಕ ನೀರು ಹರಿಸಲಾಗುವುದು. ಯೋಜನೆ ಮಂಜೂರಾತಿ ಅಂತಿಮ ಹಂತದಲ್ಲಿದೆ. ಸಿಎಂ ಒಪ್ಪಿಗೆ ನಂತರ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ, ಲೋಕೇಶಪ್ಪ, ಆಗ್ರೋ ಶಿವಣ್ಣ, ಲಿಡ್ಕರ್ ಮಾಜಿ ಅಧ್ಯಕ್ಷ ಒ. ಶಂಕರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ. ತಿಪ್ಪೇಶ್, ಅರಳಿಹಳ್ಳಿ ಲೋಕಣ್ಣ, ದೀಪಿಕಾ, ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ತಾಲೂಕಿನಿಂದ 10 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡು ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿ, ಗೋವಿಂದಪ್ಪ ಅವರನ್ನು ಮಂತ್ರಿ ಮಾಡಲು ಒತ್ತಾಯಿಸಬೇಕಾಗಿದೆ ಎಂದು ಕೆಪಿಸಿಸಿ ಸದಸ್ಯ ಅಲ್ತಾಫ್ ಪಾಷಾ ಹೇಳಿದರು. ಶಾಸಕ ಬಿ.ಜಿ. ಗೋವಿಂದಪ್ಪ ಅವರು ಸಚಿವ ಸ್ಥಾನ ತ್ಯಾಗ ಮಾಡಿ ತಾಲೂಕಿಗೆ ಭದ್ರಾ ನೀರು ಹರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಅಂತಿಮ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮಂತ್ರಿ ಮಾಡಲು ಆಗ್ರಹಿಸಬೇಕು ಎಂದರು.
ಶಾಸಕ ಬಿ.ಜಿ. ಗೋವಿಂದಪ್ಪ ಅವರ ಶ್ರಮದ ಫಲವಾಗಿ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಬಂದಿದೆ. ಇದರಲ್ಲಿ ಶಾಸಕರ ಪಾತ್ರ ಹೆಚ್ಚಾಗಿರುವುದರಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಸರ್ಕಾರ ಬಿ.ಜಿ. ಗೋವಿಂದಪ್ಪ ಅವರ ಹೆಸರು ನಾಮಕರಣ ಮಾಡಬೇಕೆಂದು ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್ ಒತ್ತಾಯಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿ.ಜಿ. ಗೋವಿಂದಪ್ಪ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಅವರನ್ನು ಪುನರಾಯ್ಕೆ ಮಾಡಿ ಮುಂದಿನ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಕಲ್ಪಿಸೋಣ ಎಂದು ವೇದಿಕೆಯಲ್ಲಿದ್ದ ಮುಖಂಡರು ಒಮ್ಮತದಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಗೋವಿಂದಪ್ಪ ಅವರ ಹೆಸರು ಸೂಚಿಸಿದರು.