21 ಕೆರೆ ನೀರಾವರಿಗೆ ತಕ್ಷಣ ವರದಿ ನೀಡಲು ಸಿಎಂ ಸೂಚನೆ

ವಿಜಯವಾಣಿ ವರದಿ ಪರಿಣಾಮ
Lake
ಹಿರಿಯೂರು ತಾಲೂಕಿನ ಕಲ್ವಳ್ಳಿ ಭಾಗದ ಕಿಚ್ಚಲ ಕೆರೆ.Lake
Published on: 

ಹಿರಿಯೂರು: ತಾಲೂಕಿನ ಕಲ್ವಳ್ಳಿ ಭಾಗದ 21 ಹಳ್ಳಿಗಳ ವ್ಯಾಪ್ತಿಯ ಕೆರೆ, ಕಟ್ಟೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಅನುಷ್ಠಾನ ಸಾಧ್ಯತೆ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್​ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಯೋಜನೆ ಶುರುವಿಗೆ ಮುನ್ನ ಅಸಮಾಧಾನ ಎಂಬ ತಲೆಬರಹದಲ್ಲಿ ರೈತರ ಆಕ್ರೋಶದ ಬಗ್ಗೆ ಅ. 28ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಟಿ. ರುಮೂರ್ತಿ ಅವರು ಅಜಯ್​ ಧರಮ್​ಸಿಂಗ್​ ಮತ್ತು ಎಚ್​.ಸಿ. ಬಾಲಕೃಷ್ಣ ಅವರ ಗಮನಕ್ಕೆ ತಂದು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಕಲ್ವಳ್ಳಿ ಭಾಗದ ಜನರ ದಶಕದ ಹೋರಾಟಕ್ಕೆ ಮಣಿದ ಸರ್ಕಾರ 244 ಕೋಟಿ ರೂ. ವೆಚ್ಚದಲ್ಲಿ ಗಾಯತ್ರಿ ಜಲಾಶಯ ಸೇರಿದಂತೆ 16 ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಈ ಯೋಜನೆಯಲ್ಲಿ ಮೂಲ ಕಲ್ವಳ್ಳಿ ಭಾಗದ 21 ಗ್ರಾಮ ಕೈ ಬಿಡಲಾಗಿದೆ, ಏತ ನೀರಾವರಿ ಯೋಜನೆಯಲ್ಲಿ ಸೇರ್ಪಡೆ ಮಾಡುವಂತೆ ರೈತರು ಉಪ ಚುನಾವಣೆ ಬಹಿಷ್ಕಾರ, ಹೋರಾಟದ ಎಚ್ಚರಿಕೆ ನೀಡಿದ್ದರು.

ದಿಂಡಾವರ ಗ್ರಾಮದಲ್ಲಿ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಸಿಎಂ ಡಿ.ಕೆ.ಶಿವಕುಮಾರ್​ ಯೋಜನೆಯಿಂದ ಕೈ ಬಿಟ್ಟಿರುವ ಕೆರೆಗಳ ಸೇರ್ಪಡೆ, ನೀರಿನ ಲಭ್ಯತೆ, ಯೋಜನೆ ಕಾರ್ಯಗತ ಕುರಿತು ಅಧ್ಯಯನ ಮಾಡಿ, ತಕ್ಷಣ ಸರ್ಕಾರಕ್ಕೆ ವರದಿ ಕೊಡಿ ಹಾಗೂ ಯೋಜನೆ ಅನುಷ್ಠಾನಕ್ಕೆ ಡಿಪಿಆರ್​ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.