

ಕೆ. ಕೆಂಚಪ್ಪ ಮೊಳಕಾಲ್ಮೂರು
ನಡು ರಸ್ತೆಯಲ್ಲೇ ಪೈಪ್ಲೈನ್ ಚರಂಡಿಗಳು, ಕಿತ್ತು ಹೋದ ನಲ್ಲಿ ಮತ್ತು ಮೀಟರ್ಗಳು, ರಭಸವಾಗಿ ಹರಿಯದ ನೀರು, ಶುದ್ಧ್ದವಾಗಿ ಸಿಗಬೇಕಾಗಿದ್ದ ಕುಡಿಯುವ ನೀರಿನಲ್ಲಿ ಅಶುದ್ಧತೆಯದ್ದೇ ಬಹುಪಾಲು. ಐದು ವರ್ಷವಾದರೂ ಮುಗಿಯದ ಕಾಮಗಾರಿ...!
ಬರದ ತಾಲೂಕಿನಲ್ಲಿ ಬಹು ನಿರೀಕ್ಷೆ ಹಾಗೂ ಸಂತಸ ಮೂಡಿಸಿದ್ದ ಜೆಜೆಎಂ ಶುದ್ಧ ಕುಡಿಯುವ ನೀರು ಯೋಜನೆ ಅವಾಂತರದ ಸ್ಯಾಂಪಲ್ಗಳಿವು.
ಕೇಂದ್ರದ ಮಹತ್ವಪೂರ್ಣ ಯೋಜನೆ ಮೊಳಕಾಲ್ಮೂರು ತಾಲೂಕಿನಲ್ಲಿ ಬಹುತೇಕ ಹಳ್ಳ ಹಿಡಿದಿದೆ. ಆರಂಭದಲ್ಲಿ ಶಾಶ್ವತ ಪರಿಹಾರ ಎಂಬ ಉತ್ಸಾಹದ ಭರವಸೆಯಲ್ಲಿ ಜನಮನ್ನಣೆ ಪಡೆದಿದ್ದ ಯೋಜನೆ ಅಧಿಕಾರಿಗಳ ರ್ನಿಲಕ್ಷ ಹಾಗೂ ಗುತ್ತಿಗೆ ದಾರರ ಬೇಕಾಬಿಟ್ಟಿ ಕಾಮ ಗಾರಿಯಿಂದ ಯೋಜನೆಗೆ ಗ್ರಹಣ ಹಿಡಿದಿದೆ.
5 ವರ್ಷಗಳ ಹಿಂದೆ ಬರಪೀಡಿದ ಪ್ರದೇಶದ ಜನರಿಗೆ ಶಾಶ್ವತ ಕುಡಿ ಯುವ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತುಂಗಭದ್ರಾ ಹಿನ್ನೀರು ಲಭ್ಯತೆ ಆಧಾರದಲ್ಲಿ ತಾಲೂಕಿನ 128 ಹಳ್ಳಿಗಳ ಪ್ರತಿ ಮನೆಗೆ ಶುದ್ಧ ಗಂಗೆ ಕೊಡಲು 113 ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಸೂಕ್ತ ಯೋಜನೆ, ಯೋಚನೆ ಕೊರತೆಯಿಂದ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆಯಲ್ಲೇ ಪೈಪ್ಲೈನ್ ಹಾಕಲಾಗಿದೆ.
ತೆಗೆದ ಗುಂಡಿ ಸರಿಯಾಗಿ ಮುಚ್ಚಿಲ್ಲ. ಮನೆಗಳಿಗೆ ಅಳವಡಿಸಿದ ನಲ್ಲಿ ಮತ್ತು ಮೀಟರ್ ಕಿತ್ತು ಹೋಗಿವೆ. ಗುಣಮಟ್ಟದ ಪೈಪ್ಲೈನ್ ಹಾಕದ ಕಾರಣ ನೀರಿನ ಸೋರಿಕೆಯಿಂದ ಸಮರ್ಪಕ ನೀರೂ ಸಿಗುತ್ತಿಲ್ಲ. ಇದರಿಂದ ಜನರು ಅಧಿಕಾರಿಗಳನ್ನು ದೂರುವಂತಾಗಿದೆ.
ಗ್ರಾಮೀಣ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಕೋಟಿ ಕೋಟಿ ಹಣ ಸುರಿದರೂ ಅಧಿಕಾರಿಗಳ ನಿರುತ್ಸಾಹ ಹಾಗೂ ಗುತ್ತಿಗೆದಾರರ ಕಳಪೆ ಕೆಲಸದಿಂದ ಜೆಜೆಎಂ ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ನಾಗಸಮುದ್ರದಲ್ಲಿ ಜೆಜೆಎಂ ಯೋಜನೆ ಕಳಪೆ ಕೆಲಸದಿಂದ ಅನೇಕ ಬಾರಿ ಪೈಪ್ನಲ್ಲಿ ಚರಂಡಿ ನೀರು ಮಿಶ್ರವಾಗಿ ಬರುತ್ತಿದೆ. ನಿರ್ವಹಣೆ ಹೊತ್ತಿರುವ ಸ್ಥಳಿಯ ಗ್ರಾಪಂ ಆಡಳಿತದ ಅಧಿಕಾರಿಗಳ ರ್ನಿಲಕ್ಷದಿಂದ ಅಶುದ್ಧ ನೀರು ಸೇವನೆ ಮಾಡುವಂತಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲ. ಕುಡಿಯುವ ನೀರಿಗಾಗಿ ಬಳಸುತ್ತಿರುವ ಬೋರ್ವೆಲ್ ತಿಪ್ಪೆ ಮಧ್ಯದಲ್ಲಿದ್ದರೂ ಗಮನಿಸುತ್ತಿಲ್ಲ. ಈ ಕುರಿತು ಪಿಡಿಒ ಅವರಿಗೆ ಪ್ರಶ್ನಿಸಿದರೆೆ ಹಾರಿಕೆ ಉತ್ತರ ಕೊಡುತ್ತಾರೆ. ಹಾಗಾಗಿ, ಬೇಸತ್ತು ಗ್ರಾಮಸ್ಥರೆಲ್ಲರೂ ಸೇರಿ ಜಿಪಂ ಸಿಇಒ ಅವರಿಗೆ ಪತ್ರ ಬರೆದಿದ್ದೇವೆ ಎಂದು ಗ್ರಾಮದ ಎಸ್.ಎಂ. ಓಬಳೇಶ ಮಾಹಿತಿ ನೀಡಿದರು.
ಅವೈಜ್ಞಾನಿಕ ಕಾಮಗಾರಿಯಿಂದ ನಲ್ಲಿ ಅನುಷ್ಠಾನಗೊಳಿಸಿದ ಎಲ್ಲ ಮನೆಗಳಿಗೆ ನೀರು ಸಮರ್ಪಕವಾಗಿ ರಭಸವಾಗಿ ಹರಿದು ಬರುತ್ತಿಲ್ಲ. ಹೀಗಾಗಿ, ಜನರು ಅನಿವಾರ್ಯವಾಗಿ ಮೋಟರ್ ಅಳವಡಿಸಿ ನೀರು ಪಡೆಯುವಂತಾಗಿದೆ. ಇದರಿಂದ ಮೋಟರ್ ಇಲ್ಲದ ಮನೆಗಳಿಗೆ ನೀರು ಸಿಗದ ಕಾರಣ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಮೀಟರ್ ಇದ್ದರೂ ಮೋಟರ್ ಮೂಲಕವೇ ನೀರು ಪಡೆಯುವಂತಾಗಿದ್ದು, ನೀರಿನ ಕಂದಾಯ ಕಟ್ಟುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಸ್ಥಳಿಯರು.