ಬೇಡಿಕೆಗಳು: ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಕೆರೆಗಳಿಗೆ ನೀರು ತುಂಬಿಸುವುದು. ಪ್ರಸಕ್ತ ವರ್ಷ ಭೀಕರ ಬರ ಪರಿಸ್ಥಿತಿಯಿಂದ ಬಿತ್ತನೆ ಅವಧಿ ಮುಗಿದರು ವರುಣ ಕೃಪೆ ತೋರಿಲ್ಲ, ಕೆಲವೆಡೆ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಧರ್ಮಪುರ ಏತ ನೀರಾವರಿ ಯೋಜನೆ ಯಶಸ್ವಿಯಾದರೂ ಸಂಕಷ್ಟದ ಸಮಯದಲ್ಲಿ ಕೆರೆಗಳಿಗೆ ನೀರು ತುಂಬಿಸಲು ನೀರಿನ ಅಲೊಕೇಷನ್ ಇಲ್ಲ. ಮಳೆಗಾಲದಲ್ಲಿ ವೇದಾವತಿ ನದಿ ಮೈದುಂಬಿ ಹರಿದರೆ ಮಾತ್ರ 2 ತಿಂಗಳ ಕಾಲ 8 ಕೆರೆಗಳಿಗೆ ನೀರು ಹರಿಸಲು ಸಾಧ್ಯವಿದೆ. ಕರ್ನಾಟಕ-ಆಂಧ್ರ ಗಡಿ ಭಾಗದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಹೊಸಕೆರೆ ಬೇತೂರು ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ. ವಿವಿ ಸಾಗರದ ಜಲಾಶಯದ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಅಕ್ಕ ಪಕ್ಕದ ತಾಲೂಕಿನ ಜನಪ್ರತಿನಿಧಿಗಳ ರಾಜಕೀಯ ಚಾಣಾಕ್ಷತೆ ನಮ್ಮಲ್ಲಿ ಇಲ್ಲದಿರುವುದು ದುರಂತ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.