

ಎಂ. ಯೋಗೀಶ ಹೊಸದುರ್ಗ
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ತುಸು ಹಿಂಗಾರು ಮಳೆಯಾಗಿರುವ ಹಿನ್ನೆಲೆಯಲ್ಲಿ ಹಿಂಗಾರು ಬೆಳೆ ಕಡಲೆ ಬಿತ್ತನೆ ಕಾರ್ಯ ತಾಲೂಕಿನಾದ್ಯಂತ ಚುರುಕು ಗೊಂಡಿದೆ. ಕಸಬಾ ಹೋಬಳಿಯಲ್ಲಿ ಬಿತ್ತನೆ ಕಾರ್ಯ ತುರುಸಿನಿಂದ ನಡೆದಿದೆ. ಮಳೆಯ ಅಭಾವದಿಂದ ತಾಲೂಕಿನಲ್ಲಿ ಮುಂಗಾರು ಬೆಳೆಯು ಸಂಪೂರ್ಣವಾಗಿ ವಿಫಲಗೊಂಡಿತ್ತು. ಮುಂಗಾರಿನ ಬೆಳೆ ವೈಫಲ್ಯದಿಂದ ಹಿಂಗಾರು ಬೆಳೆ ಬಿತ್ತನೆಗೆ ಕೃಷಿಕರು ಕಾದು ಕುಳಿತಿದ್ದರು. ಕಳೆದ ವಾರ ಸಣ್ಣ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದಂತೆ ಬಿತ್ತನೆಗೆ ಭೂಮಿ ಹದಗೊಳಿಸುವ, ಬಿತ್ತನೆ ಬೀಜ ಖರೀದಿ ಚಟುವಟಿಕೆಗಳು ನಡೆದಿದೆ.
ತಾಲೂಕಿನಲ್ಲಿ ಹಿಂಗಾರು ಬೆಳೆಯಾಗಿ ಕಡಲೆ ಮತ್ತು ಹಿಂಗಾರು ಜೋಳ ಬೆಳೆಯುವ ವಾಡಿಕೆಯಿದೆ. ಕಳೆದ ವರ್ಷ ಹಿಂಗಾರಿನಲ್ಲಿ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯ ಬಿತ್ತನೆಯಾಗಿತ್ತು. ಮುಂಗಾರು ವೈಫಲ್ಯದಿಂದ ಈ ಬಾರಿ ಕಡಲೆ ಬಿತ್ತನೆ ಪ್ರದೇಶ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗುವ ನಿರೀೆಯಿದೆ. ಬಿತ್ತನೆಯಾದ ನೂರರಿಂದ ನೂರಾ ಹತ್ತು ದಿನಗಳಲ್ಲಿ ಕಟಾವಿಗೆ ಬರುವ ಕಡಲೆ ಬೆಳೆಯು ಮಳೆಯ ಕೊರತೆಯಾದರೂ ಮುಂಜಾನೆ ಇಬ್ಬನಿಯ ಹನಿಗಳಿಂದ ಬೆಳವಣಿಗೆಯಾಗುತ್ತದೆ. ಬಿತ್ತನೆ ಸಮಯ ದಲ್ಲಿ ಮಾತ್ರ ಉತ್ತಮ ಮಳೆ ಅವಶ್ಯಕತೆಯಿದೆ. ಸದ್ಯ ಮಳೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಮುಂದಾಗಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯಲ್ಲಿ ಕಪ್ಪು ಮಣ್ಣಿನ ಭೂಮಿ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಡಲೆ ಬಿತ್ತನೆಯಾಗುತ್ತದೆ. ಉಳಿದಂತೆ ಮತ್ತೋಡು ಶ್ರೀರಾಂಪುರ ಮಾಡದಕೆರೆ ಹೋಬಳಿಯಲ್ಲಿ ಅಲ್ಪ ಪ್ರಮಾಣದ ಬಿತ್ತನೆಯಾಗುತ್ತದೆ. ನವೆಂಬರ್ ತಿಂಗಳ 2ನೇ ವಾರದವರೆಗೆ ಕಡಲೆ ಬಿತ್ತನೆಗೆ ಅವಕಾಶವಿದೆ. ಮುಂಗಾರು ಬೆಳೆ ವೈಫಲ್ಯದಿಂದ ನಷ್ಟಕ್ಕೆ ಒಳಗಾಗಿರುವ ರೈತರು ಉತ್ತಮ ಹಿಂಗಾರು ಮಳೆಯ ನಿರೀೆಯಲ್ಲಿದ್ದಾರೆ. ಮಳೆ ಬರದೆ ಕೃಷಿ ಚಟುವಟಿಕೆಗಳಿಲ್ಲದೆ ಭಣಗುಡುತ್ತಿದ್ದ ಕೃಷಿ ಜಮೀನಿನಲ್ಲಿ ಬಿತ್ತನೆ ಸಿದ್ಧತೆ ನಡೆಯುತ್ತಿದೆ. ಎಕರೆಗೆ 8ರಿಂದ 10 ಕ್ವಿಂಟಾಲ್ ಕಡಲೆ ನಿರೀಸಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.
ರೈತ ಸಂಪರ್ಕ ಕೇಂದ್ರದ ಮೂಲಕ ಈಗಾಗಲೇ ರೈತರು ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಕೃಷಿ ಇಲಾಖೆಯ ಹೊಸದುರ್ಗದ ರೈತ ಸಂಪರ್ಕ ಕೇಂದ್ರದಲ್ಲಿ 1 ಸಾವಿರ ಕ್ವಿಂಟಾಲ್, ಮಾಡದಕೆರೆ ಹಾಗೂ ಶ್ರೀರಾಂಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ತಲಾ 50 ಕ್ವಿಂಟಾಲ್ ಕಡಲೆ ಬೀಜದ ದಾಸ್ತಾನು ಮಾಡಿದೆ. ಬುಧವಾರದವರೆಗೆ ರೈತರು 300 ಕ್ವಿಂಟಾಲ್ ಬಿತ್ತನೆ ಬೀಜ ಖರೀದಿಸಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಬೆಳೆ ವಿಫಲವಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಹಿಂಗಾರು ಜೋಳ ಬಿತ್ತನೆಗೆ ಉತ್ತಮ ವಾತಾವರಣ ಮತ್ತು ಅವಕಾಶವಿದ್ದು ರೈತರು ಜೋಳ ಬಿತ್ತನೆ ಮಾಡುವ ಮೂಲಕ ಜಾನುವಾರುಗಳಿಗೆ ಮೇವು ಒದಗಿಸಬಹುದಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರು ಜೋಳದ ಬಿತ್ತನೆ ಬೀಜ ಲಭ್ಯವಿದೆ . ಕೃಷಿ ಇಲಾಖೆ ಅಧಿಕಾರಿಗಳು ಮೇವಿಗಾಗಿ ಹಿಂಗಾರು ಜೋಳ ಬೆಳೆಯುವಂತೆ ರೈತರಿಗೆ ಶಿಫಾರಸು ಮಾಡುತ್ತಿದ್ದಾರೆ.